ಕಲಬುರ್ಗಿ, ನ 11 (DaijiworldNews/SM): ರಾಜ್ಯದಲ್ಲಿ ಇದೀಗ ಉಪಚುನಾವಣೆಯ ಕಾವು ಜೋರಾಗ ತೊಡಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಚುನಾವಣೆ ಗೆಲ್ಲಲು ಕಸರತ್ತುಗಳನ್ನು ನಡೆಸುತ್ತಿವೆ. ಈ ನಡುವೆ ಬಿಜೆಪಿ ಪರ ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡ ಬ್ಯಾಟ್ ಬೀಸಿದ್ದಾರೆ.
ಉಪಚುನಾವಣೆಯಲ್ಲಿ ಏನೇ ಫಲಿತಾಂಶ ಬಂದರೂ ಬಿಜೆಪಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯಕ್ಕೆ ಮದ್ಯಂತರ ಚುನಾವಣೆ ಎದುರಾಗುವುದಿಲ್ಲ ಎಂದಿದ್ದಾರೆ. ಪ್ರಸ್ತುತ ಇರುವ ಪರಿಸ್ಥಿತಿ ಗಮನಿಸಿದಾಗ ಬಿಎಸ್ ವೈ ಸರಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದಿದ್ದಾರೆ. ಹಾಗೂ ಬಿಜೆಪಿ ಪಕ್ಷದ ರಕ್ಷಣೆಗೆ ಜೆಡಿಎಸ್ ಸಿದ್ದವಾಗಿದೆ ಎನ್ನುವ ಸಿಗ್ನಲ್ ರವಾನಿಸಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಆಡಳಿತದಲ್ಲಿದ್ದ ಮೈತ್ರಿ ಸರಕಾರ ಪತನಗೊಂಡಿದೆ. ಹೀಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಒಂದಾಗಲು ಸಾಧ್ಯವಿಲ್ಲ. ಹೀಗಾಗಿ ಬಿಜೆಪಿಯ ಬುಡ ಭದ್ರವಾಗಿರಲಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಸ್ತುತ ಬಿಜೆಪಿಯಲ್ಲಿ ಯಾವುದೇ ಆಂತರಿಕ ಭಿನ್ನಾಭಿಪ್ರಾಯಗಳಿಲ್ಲ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಮಧ್ಯಂತರ ಚುನಾವಣೆಯ ಸಂಭವ ರಾಜ್ಯದಲ್ಲಿ ಎದುರಾಗದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.