ಮುಂಬೈ, ನ 11 (DaijiworldNews/SM): ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಸ್ವತಂತ್ರವಾಗಿ ಯಾವುದೇ ಪಕ್ಷಗಳು ಬಹುಮತ ಪಡೆಯದೇ ಇದ್ದ ಕಾರಣದಿಂದ ಮೈತ್ರಿ ಸರಕಾರ ರಚನೆ ಅನಿವಾರ್ಯವೆನಿಸಿದೆ. ಬಿಜೆಪಿ-ಶಿವಸೇನೆ ತಮ್ಮ ಆಂತರಿಕ ಕಚ್ಚಾಟದಿಂದ ಸರಕಾರ ರಚನೆಗೆ ವಿಫಲವಾಗಿದೆ. ಈಗಾಗಲೇ ರಾಜ್ಯಪಾಲರು ನೀಡಿದ್ದ ಆಫರನ್ನು ಬಿಜೆಪಿ ತಿರಸ್ಕರಿಸಿದೆ. ಇದೀಗ ಶಿವಸೇನೆ ಕಾಂಗ್ರೆಸ್ ಜತೆ ಸೇರಿ ಸರಕಾರ ರಚನೆಗೆ ಮುಂದಾಗುತ್ತಿದೆ ಎಂದು ತಿಳಿದುಬಂದಿದೆ.
ಬಿಜೆಪಿಯ ಮಿತ್ರಪಕ್ಷವಾಗಿದ್ದ ಶಿವಸೇನಾ, ಮೈತ್ರಿ ಮುರಿದುಕೊಂಡು ಎನ್ಸಿಪಿ ಮತ್ತು ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸುವ ಕಸರತ್ತು ಆರಂಭಿಸಿದೆ. ಈಗಾಗಲೇ ಶಿವಸೇನೆಗೆ ಎನ್ಸಿಪಿ ತನ್ನ ಬೆಂಬಲವನ್ನು ಸೂಚಿಸಿದೆ. ಆದರೆ, ಕಾಂಗ್ರೆಸ್ ಮಾತ್ರ ತನ್ನ ಬೆಂಬಲ ಖಚಿತಗೊಳಿಸಿಲ್ಲ. ಇನ್ನೊಂದೆಡೆ ಸರಕಾರ ರಚನೆಗೆ ಒಂದಿಷ್ಟು ಕಾಲಾವಕಾಶ ನೀಡಬೇಕೆಂದು ಶಿವಸೇನೆ ಮನವಿ ಮಾಡಿದ್ದು, ರಾಜ್ಯಪಾಲರು ಮನವಿಯನ್ನು ತಿರಸ್ಕರಿಸಿದ್ದಾರೆ.
ಇನ್ನೊಂದೆಡೆ ಮೂರನೇ ಅತಿ ದೊಡ್ಡ ಪಕ್ಷವಾಗಿರುವ ಎನ್ ಸಿಪಿ ಪಕ್ಷಕ್ಕೆ ಸರಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡಿದ್ದಾರೆ. ಆದರೆ, ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸುತ್ತದೆಯಾ ಎಂಬ ಕುತೂಹಲ ಮನೆ ಮಾಡಿದೆ. ಒಂದೊಮ್ಮೆ ಯಾವುದೇ ಪಕ್ಷಗಳು ಸರಕಾರ ರಚನೆಗೆ ಮುಂದಾಗದಿದ್ದಲ್ಲಿ, ರಾಷ್ಟ್ರಪತಿ ಆಳ್ವಿಕೆ ಖಚಿತವಾಗಿದೆ. ಇನ್ನು ಚಿನಾವಣಾ ಫಲಿತಾಂಸ ಹೊರ ಬಿದ್ದು ಹದಿನಾರು ದಿನ ಕಳೆದರೂ ಯಾವುದೇ ಪಕ್ಷಗಳು ಸರಕಾರ ರಚನೆಗೆ ಮುಂದಾಗದಿರುವುದು ಅಚ್ಚರಿಯ ವಿಚಾರವಾಗಿದೆ.