ನವದೆಹಲಿ, ಅ.14 (DaijiworldNews/AA): ಜರ್ಮನಿಯ ಫ್ರಾಂಕ್ಫರ್ಟ್ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಹೈಜಾಕ್ ಎಚ್ಚರಿಕೆ ಸಂದೇಶ ರವಾನೆಯಾದ ಬೆನ್ನಲ್ಲೇ ವಿಮಾನವನ್ನು ರಾಜಸ್ಥಾನದ ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.

ಏರ್ ಇಂಡಿಯಾ ವಿಮಾನವು ಜರ್ಮನಿಯ ಫ್ರಾಂಕ್ಫರ್ಟ್ನಿಂದ ನವದೆಹಲಿಗೆ ಸುಮಾರು 250 ಪ್ರಯಾಣಿಕರನ್ನು ಹೊತ್ತು ಸಾಗುತ್ತಿತ್ತು. ಅಹಮದಾಬಾದ್ನ ಏರ್ ಟ್ರಾಫಿಕ್ ಕಂಟ್ರೋಲ್ಗೆ (ಎಟಿಸಿ) ಕೆಲವೇ ಸೆಕೆಂಡುಗಳ ಕಾಲ 'ಸ್ಕ್ವಾಕ್-7500' ಎಚ್ಚರಿಕೆಯ ಸಂಕೇತ ಬಂದಿದೆ. ಕೂಡಲೇ ಎಚ್ಚೆತ್ತ ಭದ್ರತಾ ಸಂಸ್ಥೆಗಳು ವಿಮಾನವನ್ನು ಜೈಪುರ ವಿಮಾನ ನಿಲ್ದಾಣದತ್ತ ತಿರುಗಿಸಿದವು. ಬೆಳಗ್ಗೆ ಸುಮಾರು 9:45ಕ್ಕೆ ವಿಮಾನ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಯಿತು.
ವಿಮಾನ ಲ್ಯಾಂಡ್ ಆದ ತಕ್ಷಣ, ಭದ್ರತಾ ಶಿಷ್ಟಾಚಾರದ ಭಾಗವಾಗಿ ಅದನ್ನು ಪ್ರತ್ಯೇಕ ಐಸೊಲೇಷನ್ ಬೇಗೆ ಕೊಂಡೊಯ್ಯಲಾಯಿತು. ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಬಾಂಬ್ ನಿಷ್ಕ್ರಿಯ ದಳ ಮತ್ತು ಸ್ಥಳೀಯ ಪೊಲೀಸರು ವಿಮಾನ, ಪ್ರಯಾಣಿಕರ ಲಗೇಜು ಮತ್ತು ಕ್ಯಾಬಿನ್ ಅನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಿದರು. ಸದ್ಯ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಪೈಲಟ್ ಆಕಸ್ಮಿಕವಾಗಿ ಹೈಜಾಕ್ ಎಚ್ಚರಿಕೆಯ ಬಟನ್ ಒತ್ತಿದ್ದೇ ಈ ಗೊಂದಲಕ್ಕೆ ಕಾರಣ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ. ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಸಮಗ್ರ ಭದ್ರತಾ ತಪಾಸಣೆಗಳು ಪೂರ್ಣಗೊಂಡ ಬಳಿಕ, ಅದೇ ವಿಮಾನದಲ್ಲಿ ಪ್ರಯಾಣಿಕರನ್ನು ಮರಳಿ ದೆಹಲಿಗೆ ಕಳುಹಿಸಲು ಕ್ರಮ ಕೈಗೊಳ್ಳಲಾಯಿತು.