ಬೆಂಗಳೂರು,ಅ.14 (DaijiworldNews/AK): ಕರ್ನಾಟಕದಲ್ಲಿ ಶಿಕ್ಷಕರ ಕೊರತೆಯನ್ನು ನಿವಾರಿಸಲು ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆ ಇರಿಸಿದೆ. ಡಿಸೆಂಬರ್ ತಿಂಗಳೊಳಗೆ 17,000 ಶಿಕ್ಷಕರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಘೋಷಿಸಿದ್ದಾರೆ.

ಸುಪ್ರೀಂ ಕೋರ್ಟ್ನಲ್ಲಿ ಹೋರಾಡಿ, ಹಿಂದಿನ ಸರ್ಕಾರದಿಂದ ಬಾಕಿ ಉಳಿದಿದ್ದ 13,500 ಶಿಕ್ಷಕರ ನೇಮಕಾತಿಯನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದರೊಂದಿಗೆ, ಅನುದಾನಿತ ಶಾಲೆಗಳಿಗೆ (Aided Schools) 6,000 ಶಿಕ್ಷಕರನ್ನು ನೇಮಿಸಲು ಸರ್ಕಾರದಿಂದ ಅನುಮತಿ ದೊರೆತಿದ್ದು, ಈ ಪ್ರಕ್ರಿಯೆಯೂ ಡಿಸೆಂಬರ್ ಅಥವಾ ಜನವರಿ ವೇಳೆಗೆ ಅಂತ್ಯಗೊಳ್ಳಲಿದೆ. ಶಿಕ್ಷಕರ ನೇಮಕಾತಿಯು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಅನುಕೂಲ ಒದಗಿಸಲಿದೆ ಎಂದು ಅವರು ತಿಳಿಸಿದ್ದಾರೆ.