ಬೆಂಗಳೂರು, ನ.12(Daijiworld News/SS): ತೆರಿಗೆ ವಂಚನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಜತೆಗೆ ರಾಜ್ಯದಲ್ಲಿ ತೆರಿಗೆ ಸಂಗ್ರಹ ಬೆಳವಣಿಗೆ ವೃದ್ಧಿಗೆ ಶ್ರಮಿಸಬೇಕು ಎಂದು ಅಧಿಕಾರಿಗಳಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಜಿಎಸ್ಟಿ, ಕೆಎಸ್ಟಿ, ವೃತ್ತಿ ತೆರಿಗೆ ಸಂಗ್ರಹ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಒಟ್ಟು ತೆರಿಗೆ ಸಂಗ್ರಹ ಶೇ.10.3 ಇದ್ದರೆ, ಜಿಎಸ್ಟಿ ಸಂಗ್ರಹ ಪ್ರಮಾಣ ಶೇ.12.2 ಏರಿಕೆ ಕಂಡಿದೆ. ವಾಣಿಜ್ಯ ತೆರಿಗೆ ಇಲಾಖೆ 2019-20ನೇ ಸಾಲಿನಲ್ಲಿ 76,046 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಇದ್ದು, ಈವರೆಗೆ 42,823 ಕೋಟಿ ರೂ. ಸಂಗ್ರಹಿಸಿದೆ. ಒಟ್ಟಾರೆ ಬೆಳವಣಿಗೆ ದರ ಶೇ.10.3 ಇದ್ದು, ವಾರ್ಷಿಕ ಗುರಿಯ ಶೇ. 56.3 ತೆರಿಗೆ ಸಂಗ್ರಹವಾಗಿದೆ ಎಂದು ಹೇಳಿದರು.
ಜಿಎಸ್ಟಿ ಮೂಲಕವೇ 33,060 ಕೋಟಿ ರೂ. ಸಂಗ್ರಹವಾಗಿದ್ದು, ಜಿಎಸ್ಟಿ ಬೆಳವಣಿಗೆ ದರವೂ ಏರಿಕೆ ಕಂಡಿದೆ. ತೆರಿಗೆ ಬಾಕಿ ಇರುವ 9,592 ಸಂಸ್ಥೆಗಳಿಗೆ ಭೇಟಿ ನೀಡಿ 465.3 ಕೋಟಿ ರೂ. ಸಂಗ್ರಹಿಸಲಾಗಿದೆ. ತೆರಿಗೆ ಸರಿಯಾಗಿ ಪಾವತಿಸದ 74,598 ನೋಂದಣಿ ರದ್ದು ಮಾಡಲಾಗಿದೆ ಎಂದು ತಿಳಿಸಿದರು.
ತೆರಿಗೆ ಸಂಗ್ರಹವನ್ನು ಇನ್ನಷ್ಟು ಉತ್ತಮ ಪಡಿಸಲು ತೆರಿಗೆ ವಂಚನೆ, ನಕಲಿ ನೋಂದಣಿ ಪ್ರಕರಣಗಳ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರಕು ಸಾಗಾಣೆ ವೇಳೆ ತಪಾಸಣೆ ಕೈಗೊಳ್ಳಬೇಕು ಎಂದು ಹೇಳಿದರು.