ತಿರುವನಂತಪುರ, ನ.12(Daijiworld News/SS): ಶಬರಿಮಲೆ ದೇವಸ್ಥಾನದಲ್ಲಿ ದಾಳಿ ನಡೆಸುವುದಾಗಿ ಐಸಿಸ್ ಉಗ್ರರು ಬೆದರಿಕೆ ಹಾಕಿರುವ ಹಿನ್ನಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಶಬರಿಮಲೆಗೆ ಭಕ್ತರ ಯಾತ್ರೆ ಆರಂಭವಾಗಲು ಕೆಲವೇ ದಿನ ಬಾಕಿ ಉಳಿದಿದ್ದು, ಇಲ್ಲಿಗೆ ಉಗ್ರರು ನುಸುಳುವ ಸಾಧ್ಯತೆ ಬಗ್ಗೆ ಪೊಲೀಸ್ ಗುಪ್ತಚರ ವಿಭಾಗ ಸರ್ಕಾರಕ್ಕೆ ಮಾಹಿತಿ ನೀಡಿದೆ.
ಶಬರಿಮಲೆ ಅರಣ್ಯ ಪ್ರದೇಶದಲ್ಲಿ ಉಗ್ರ ದಾಳಿ ಸಾಧ್ಯತೆ ಹೆಚ್ಚಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ನಕ್ಸಲ್ ದಾಳಿ ಭೀತಿಯೂ ಇರುವುದನ್ನು ಮನಗಂಡ ಪೊಲೀಸ್ ಇಲಾಖೆ ಅನ್ಯ ರಾಜ್ಯಗಳ ಭದ್ರತಾ ಏಜೆನ್ಸಿಗಳ ನೆರವು ಪಡೆಯಲು ತೀರ್ಮಾನಿಸಿದೆ.
ಕೊಚ್ಚಿ ನಗರ ಪೊಲೀಸ್ ಆಯುಕ್ತರು ಕಾರ್ಯಾಚರಣೆಯ ಸಂಚಾಲಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಶಬರಿಮಲೆ ಯಾತ್ರಿಕರಿಗೆ ನಾಲ್ಕು ಹಂತಗಳಲ್ಲಿ ಭದ್ರತೆ ಒದಗಿಸಲಾಗಿದ್ದು, ಎಡಿಜಿಪಿ ಶೇಖ್ ದರ್ವೆಶ್ ಸಾಹೇಬ್'ಗೆ ಭದ್ರತಾ ಹೊಣೆ ವಹಿಸಲಾಗಿದೆ
ಸ್ಪೋಟಕ ಹಾಗೂ ಶಸ್ತ್ರಾಸ್ತ್ರಗಳನ್ನು ಸಮುದ್ರ ಮಾರ್ಗ ಮೂಲಕ ಕೇರಳಕ್ಕೆ ಸಾಗಿಸುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಪುಲ್ಲುಮೇಡ್ ಪ್ರದೇಶದಲ್ಲಿ ಗಸ್ತು ಚುರುಕುಗೊಳಿಸಲು ನಿರ್ದೇಶನ ನೀಡಲಾಗಿದೆ.