ಬೆಂಗಳೂರು, ನ 12 (Daijiworld News/ MB):ಯೂಟ್ಯೂಬ್ , ಟಿಕ್ಟಾಕ್ ಗೆ ಅಪ್ ಲೋಡ್ ಮಾಡುವುದಕ್ಕಾಗಿ ದೆವ್ವದ ಮುಖವಾಡಿ ಧರಿಸಿ ಜನರನ್ನು ಬೆದರಿಸಿ ಪ್ರ್ಯಾಂಕ್ ವಿಡಿಯೊ ಮಾಡುತ್ತಿದ್ದ 7 ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಈ 7 ಯುವಕರು ಯೂಟ್ಯೂಬ್ನಲ್ಲಿ ಈ ಪ್ರ್ಯಾಂಕ್ ವಿಡಿಯೊ ಅಪ್ಲೋಡ್ ಮಾಡಿದರೆ ಚಂದಾದಾರರು ಹೆಚ್ಚಾದಂತೆ ಹಣ ಗಳಿಸಬಹುದು ಎಂಬ ಕಾರಣಕ್ಕೆ ನಿತ್ಯ ತಡ ರಾತ್ರಿ ದೆವ್ವದ ವೇಷ ಧರಿಸಿ ಜನರನ್ನು ಹೆದರಿಸಿ ವಿಡಿಯೋ ಮಾಡಿ ಅಪ್ ಲೋಡ್ ಮಾಡುತ್ತಿದ್ದರು.
ಇವರು ವಿಡಿಯೋ ಅಪ್ಲೋಡ್ ಮಾಡುತ್ತಿದ್ದ ಕೂಕಿ ಪೀಡಿಯಾ ಪ್ರ್ಯಾಂಕ್ ಇನ್ ಇಂಡಿಯಾ ಯೂಟ್ಯೂಬ್ ಚಾನಲ್ ನಲ್ಲಿ 809 ಚಂದಾದಾರರಿದ್ದಾರೆ.
ಇವರು ಯಶವಂತಪುರ ಮತ್ತು ಅದರ ಸುತ್ತಮುತ್ತಲ ಪ್ರದೇಶದಲ್ಲಿ ಜನರನ್ನು ತಡರಾತ್ರಿ ಬೆದರಿಸುತ್ತಿದ್ದು, ಕೆಲ ಜನಸಾಮಾನ್ಯರು ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದರಿಂದ ಹೃದಯ ಕಾಯಿಲೆ ಇರುವವರಿಗೆ ತೊಂದರೆ ಆಗುವುದು ಮಾತ್ರವಲ್ಲದೇ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ದೂರು ನೀಡಿದ್ದರು.
ಈ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದು, ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟು ಠಾಣಾ ಜಮೀನು ನೀಡಿ ಎಚ್ಚರಿಕೆ ನೀಡಲಾಗಿದೆ. ಈ ಘಟನೆಯ ಕುರಿತು ಅವರ ಪೋಷಕರಿಗೂ ತಿಳಿಸಲಾಗಿದೆ ಎಂದು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಯುವಕರಿಂದ ಪೊಲೀಸರು ಪ್ರ್ಯಾಂಕ್ ವಿಡಿಯೋ ಚಿತ್ರೀಕರಣಕ್ಕೆ ಬಳಸುತ್ತಿದ್ದ ಕ್ಯಾಮರಾ ಮತ್ತಿತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಭಾನುವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು, 7 ಯುವಕರನ್ನು ವಶಕ್ಕೆ ಪಡೆದು, ಪ್ರ್ಯಾಂಕ್ ವಿಡಿಯೋ ಚಿತ್ರೀಕರಣಕ್ಕೆ ಬಳಸುತ್ತಿದ್ದ ಕ್ಯಾಮರಾ ಮತ್ತಿತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.