ವಿಜಯಪುರ, ನ.12(Daijiworld News/SS): ಉಪಚುನಾವಣೆ ವಿಚಾರದಲ್ಲಿ ಉಹಾಪೋಹ ಹೆಚ್ಚಾಗಿದೆ. ಈಗಾಗಲೇ ಕೆಲವು ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪಟ್ಟಿ ಮಾಡಿದ್ದು, ಬಾಕಿ 7 ಕ್ಷೇತ್ರಗಳಿಗೆ ಶೀಘ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆಲ್ಲುತ್ತೇವೆ ಎಂದು ನಾನು ಹೇಳಿಲ್ಲ. 12 ಸ್ಥಾನ ಗೆಲ್ಲುವುದಾಗಿ ಹೇಳಿದ್ದೇನೆ. ಆದರೆ ದೇವೇಗೌಡರು ಯಾಕೆ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಬಿಜೆಪಿ ಜೊತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿರುವ ಶಂಕೆ ಇದೆ ಎಂದು ಹೇಳಿದರು.
ಈ ಹಿಂದೆ ಸಮ್ಮಿಶ್ರ ಸರ್ಕಾರ ರಚಿಸುವಾಗ ಖರ್ಗೆಗೆ ಸಿಎಂ ಸ್ಥಾನ ನೀಡಲು ತಾವು ವಿರೋಧಿಸಿಲ್ಲ. ಸಮ್ಮಿಶ್ರ ಸರ್ಕಾರ ಒಪ್ಪಂದ ಮಾಡುವಾಗ ನಾನು ಆ ಸಭೆಯಲ್ಲಿ ಇರಲಿಲ್ಲ. ಹೈಕಮಾಂಡ್ ಸೂಚನೆ ಹಿನ್ನೆಲೆ ನಾನು ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಜೊತೆ ಸರ್ಕಾರ ರಚನೆಗೆ ಒಪ್ಪಿದ್ದೆ ಎಂದು ತಿಳಿಸಿದರು.
ಇದೇ ವೇಳೆ ಸಚಿವ ಸಿ ಟಿ ರವಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಆಪರೇಶನ್ ಹಸ್ತ ಮಾಡಲ್ಲ. ಸಚಿವ ಸಿ.ಟಿ. ರವಿ ಮೊದಲು ಬಿಜೆಪಿ ಬಿಟ್ಟು ಬರುವವರನ್ನು ತಡೆಯಲಿ. ಬಿಜೆಪಿ ಬಳಿ ದುಡ್ಡಿದೆ, ಹೀಗಾಗಿ ಅನೈತಿಕ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ಯಾವುದೇ ಮುಖಂಡರೊಂದಿಗೆ ಮನಸ್ತಾಪ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದರು.