ಹೈದರಾಬಾದ್, ನ 12 (Daijiworld News/ MB) : ಹೈದರಾಬಾದ್ ಕಾಚಿಗೊಡಾದಲ್ಲಿ ನವೆಂಬರ್ 11 ರಂದು ಕೊಂಗು ಎಕ್ಸ್ ಪ್ರೆಸ್ ಮತ್ತು ಎಂಎಂಟಿಎಸ್ ರೈಲಿನ ನಡುವೆ ನಡೆದ ಮುಖಾಮುಖಿ ಡಿಕ್ಕಿಯ ಭೀಕರ ದೃಶ್ಯ ಸಿಸಿ ಟಿವಿ ವಿಡಿಯೋದಲ್ಲಿ ಸೆರೆಯಾಗಿದೆ.
ಈ ಅಪಘಾತದಲ್ಲಿ ಕನಿಷ್ಠ 25 ಪ್ರಯಾಣಿಕರು ಗಾಯಗೊಂಡಿದ್ದು ಅಪಘಾತದ ವಿಡಿಯೋ ವೈರಲ್ ಆಗುತ್ತಿದೆ.
ಮುಖಾಮುಖಿಯಾಗಿ ಬರುತ್ತಿದ್ದ ರೈಲುಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ರೈಲಿನ ಮೂರು ಬೋಗಿಗಳು ಹಳಿಯಿಂದ ಮೇಲೆದ್ದು ಜಖಂ ಆಗಿರುವುದು ಈ ವಿಡಿಯೋದಲ್ಲಿ ಕಂಡು ಬಂದಿದೆ. ಹಾಗೆಯೇ ಗಾಬರಿಗೊಂಡ ಪ್ರಯಾಣಿಕರು ಪ್ರಾಣ ಭಯದಿಂದ ರೈಲಿನಿಂದ ಜಿಗಿದು ಓಡಿದ್ದಾರೆ.
ಗಾಯಾಲುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಸಣ್ಣ-ಪುಟ್ಟ ಗಾಯವಾದವರಿಗೆ 5 ಸಾವಿರ ರೂಪಾಯಿ ಹಾಗೂ ಗಂಭೀರ ಗಾಯಗೊಂಡಿರುವವರಿಗೆ 25 ಸಾವಿರ ರೂಪಾಯಿ ಪರಿಹಾರ ಧನ ನೀಡಲಾಗುವುದು ಎಂದು ರೇಲ್ವೆ ಇಲಾಖೆ ಘೋಷಣೆ ಮಾಡಿದೆ.
ಈ ಅಪಘಾತ 4ನೇ ಪ್ಲಾಟ್ ಫಾರ್ಮ್ ನಲ್ಲಿ ತೆರಳಬೇಕಿದ್ದ ಎಂಎಂಟಿಎಸ್ ರೈಲಿಗೆ 2ನೇ ಪ್ಲಾಟ್ ಫಾರ್ಮ್ ನಲ್ಲಿ ಹಸಿರು ಸಿಗ್ನಲ್ ಸಿಕ್ಕ ಪರಿಣಾಮದಿಂದಾಗಿ ಸಂಭವಿಸಿತ್ತು.
ಈ ಕುರಿತು ಕೇಂದ್ರ ರೇಲ್ವೆ ಸಚಿವ ಪಿಯೂಷ್ ಗೋಯಲ್ 'ಹೈದರಾಬಾದಿನಲ್ಲಿ ನಡೆದ ರೈಲು ದುರಂತದ ವಿಷಯ ಗಮನಕ್ಕೆ ಬಂದಿದ್ದು, ತಕ್ಷಣ ಅಗತ್ಯ ನೆರವಿಗಾಗಿ ಹಾಗೂ ಮೇಲ್ವಿಚಾರಣೆಗಾಗಿ ಅಧಿಕಾರಿಗಳಿಗೆ ಸೂಚನೆ ನೀಡಿಲಾಗಿದೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಟ್ವೀಟ್ ಮಾಡಿದ್ದರು .