ಲಕ್ನೋ, ನ 12 (Daijiworld News/ MB) : ಪತಿ ಮದ್ಯಪಾನ ಮಾಡುವಾಗ ಪತ್ನಿ ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಆಕೆಯನ್ನು ಹತ್ಯೆ ಮಾಡಿ ರುಂಡವನ್ನು ಪೊಲೀಸ್ ಠಾಣೆಗೆ ತಂದ ಭೀಕರ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ನವೆಂಬರ್ 10 ರ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ನವೆಂಬರ್ 11ರ ಸೋಮವಾರ ಪತಿ ರುಂಡವನ್ನು ಪೊಲೀಸ್ ಠಾಣೆಗೆ ತಂದು ಪೊಲೀಸರಿಗೆ ಶರಣಾಗಿದ್ದಾನೆ.
ಆರೋಪಿ ಕಚ್ಪುರ ನಿವಾಸಿ ನರೇಶ್(30) ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದು ಪತ್ನಿ ಶಾಂತಿ(30)ಯ ಜೊತೆ ಪ್ರತಿನಿತ್ಯ ಮದ್ಯಪಾನ ಮಾಡಿ ಜಗಳವಾಡುತ್ತಿದ್ದ. ಭಾನುವಾರ ರಾತ್ರಿಯೂ ಪತ್ನಿ ಮದ್ಯಪಾನ ಮಾಡಿದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಕೋಪಗೊಂಡ ನರೇಶ್ ಪತ್ನಿಯ ಹತ್ಯೆ ಮಾಡಿ ರುಂಡ-ಮುಂಡ ಬೇರ್ಪಡಿಸಿ ಕೋಣೆಗೆ ಬೀಗ ಹಾಕಿ ರುಂಡದೊಂದಿಗೆ ಪರಾರಿಯಾಗಿದ್ದ.
ಈ ಜಗಳ ನಡೆಯುವ ಸಂದರ್ಭದಲ್ಲಿ ಮಕ್ಕಳು ಮಲಗಿದ್ದು, ಮರು ದಿನ ತಾಯಿ ಕಾಣದ ಕಾರಣ ಭಯಗೊಂಡು ಕೋಣೆಯ ಬಾಗಿಲು ಮುರಿದಿದ್ದಾರೆ. ತಾಯಿಯ ರುಂಡವಿಲ್ಲದ ಮೃತ ದೇಹ ನೋಡಿದ ಮಕ್ಕಳು ಆತಂಕದಿಂದ ಕುಟುಂಬಸ್ಥರಿಗೆ ತಿಳಿಸಿದ್ದು, ಮನೆಗೆ ಬಂದ ಕುಟುಂಬಸ್ಥರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಬಂದು ಪರಿಶೀಲನೆ ನಡೆಸಿದ್ದು ಆರೋಪಿ ಹತ್ಯೆ ಮಾಡಿದ ಬಳಿಕ ನೆಲದ ಮೇಲೆ ಬಿದ್ದ ರಕ್ತದ ಕಲೆಗಳನ್ನು ಒರೆಸಲು ಯತ್ನಿಸಿರುವುದು ತಿಳಿದು ಬಂದಿದೆ. ಪರಾರಿಯಾಗಿದ್ದ ಆರೋಪಿಯ ಹುಡುಕಾಟ ನಡೆಸುವಾಗ ಆತನೇ ತನ್ನ ಪತ್ನಿಯ ರುಂಡದೊಂದಿಗೆ ಪೊಲೀಸರಿಗೆ ಶರಣಾಗಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇವರು ವಿವಾಹವಾಗಿ 10 ವರ್ಷವಾಗಿದ್ದು, ಇವರಿಗೆ 3 ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗನಿದ್ದಾನೆ.