ನವದೆಹಲಿ, ನ 12 (DaijiworldNews/SM): ಮಹಾರಾಷ್ಟ್ರದಲ್ಲಿ ಕಳೆದ 16 ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಮೇಲಾಟಗಳಿಗೆ ಬ್ರೇಕ್ ಬಿದ್ದಿದೆ. ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ನಡೆಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಆ ಮೂಲಕ ಬಿಜೆಪಿಯೇತರ ಸರಕಾರ ರಚನೆಯ ಹುಮ್ಮಸ್ಸಿನಲ್ಲಿದ್ದ ಎನ್ಸಿಪಿ ಹಾಗೂ ಶಿವಸೇನೆಗೆ ತೀವ್ರ ಮುಖಭಂಗವಾಗಿದೆ.
ಮಹಾರಾಷ್ಟ್ರದಲ್ಲಿ ಆಂತರಿಕ ಕಲಹದಿಂದಾಗಿ ಸರ್ಕಾರ ರಚಿಸುವಲ್ಲಿ ಬಿಜೆಪಿ, ಶಿವಸೇನಾ ವಿಫಲವಾಗಿತ್ತು. ಈ ನಡುವೆ ಬಿಜೆಪಿಗೆ ಸರಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡಿದ್ದರು. ಆದರೆ, ಶಿವಸೇನೆ ಬೆಂಬಲವಿಲ್ಲದೆ ಸರಕಾರ ರಚಿಸುವುದಿಲ್ಲ ಎಂದು ರಾಜ್ಯಪಾಲರಿಗೆ ತಿಳಿಸಿದ್ದರು. ಬಳಿಕ ಶಿವಸೇನೆ ಹಾಗೂ ಕಾಂಗ್ರೆಸ್ ಸರಕಾರ ರಚನೆಗೆ ಮುಂದಾಗಿತ್ತು. ನಂತರ ಎನ್ ಸಿಪಿ ಗೆ ರಾಜ್ಯಪಾಲರು ಸರಕಾರ ರಚನೆಗೆ ಆಹ್ವಾನ ನೀಡಿದ್ದರು. ಈ ನಡುವೆಯೇ ರಾಷ್ಟ್ರಪತಿಗಳ ಆಳ್ವಿಕೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ತುರ್ತು ಸಚಿವ ಸಂಪುಟ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರಿಗೆ ಶಿಫಾರಸು ಮಾಡಿದ್ದರು.
ಆ ಮೂಲಕ ಬಿಜೆಪಿಯೇತ್ತರ ಸರ್ಕಾರ ರಚನೆ ಮಾಡುವ ಹುಮ್ಮಸ್ಸಿನಲ್ಲಿದ್ದ ಶಿವಸೇನೆ ಮತ್ತು ಎನ್ಸಿಪಿ ಕನಸು ಭಗ್ನಗೊಂಡಿದೆ.