ಬೆಂಗಳೂರು, ನ.13(Daijiworld News/SS): ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಿಧಾನ ಪರಿಷತ್ ಸದಸ್ಯರು ಅಸಮಾಧಾನ ಹೊರ ಹಾಕಿದ್ದಾರೆ.
ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪರಿಷತ್ ಸದಸ್ಯರು, ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ತಮ್ಮನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಸರ್ಕಾರ ಇದ್ದಾಗಲೂ ಸರಿಯಾಗಿ ನಡೆಸಿಕೊಂಡಿಲ್ಲ. ಸರ್ಕಾರ ಹೋದ ಮೇಲೂ ಸರಿಯಾಗಿ ನಡೆಸಿಕೊಂಡಿಲ್ಲ. ಕಳೆದ ವಾರ ನಡೆದ ಮಾಧ್ಯಮ ಸಂವಾದದಲ್ಲಿ, ಅವರ ರೋಗ ಏನು ಅಂತ ಹೇಳಿಕೊಂಡರೆ ತಾನೆ ಚಿಕಿತ್ಸೆ ನೀಡುವುದಕ್ಕೆ ಸಾಧ್ಯ ಅಂತ ಕಿಚಾಯಿಸಿದ್ದರು. ಇಂತಹ ಹೇಳಿಕೆ ಕೊಟ್ಟರೆ ಹೇಗೆ ಎಂದು ಗುಡುಗಿದ್ದಾರೆ.
ನೀವು ಸಮಾಧಾನ ಮಾಡುತ್ತೀರಾ. ಆದರೆ ಎಚ್.ಡಿ.ಕುಮಾರಸ್ವಾಮಿ ಬೈತಾರೆ. ಹೀಗಿದ್ದರೆ ನಾವು ಹೇಗೆ ನಿಮ್ಮ ಜೊತೆ ಇರುವುದು ಎಂದು ಪರಿಷತ್ ಸದಸ್ಯರು ದೇವೇಗೌಡ ಅವರ ಮುಂದೆ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಸರ್ಕಾರ ಇದ್ದಾಗ ನಮ್ಮನ್ನ ದೂರ ಇಟ್ಟರು, ನಮ್ಮ ಸಮಸ್ಯೆಯನ್ನೆ ಕೇಳಿಲ್ಲ. ಕಾಂಗ್ರೆಸ್ ಸಚಿವರು ನಮ್ಮ ಕೆಲಸಗಳನ್ನ ಮಾಡಿಕೊಡಲಿಲ್ಲ. ಈ ಬಗ್ಗೆ ಕುಮಾರಸ್ವಾಮಿ ಗಮನಕ್ಕೆ ತಂದರೂ ಏನು ಪ್ರಯೋಜನವಾಗಲಿಲ್ಲ. ಹೀಗಿದ್ದರೆ ನಾವು ಹೇಗೆ ಪಕ್ಷದ ಜೊತೆ ಇರಬೇಕು ಹೇಳಿ ಎಂದು ಪರಿಷತ್ ಸದಸ್ಯರು ಪ್ರಶ್ನಿಸಿದ್ದಾರೆ.