ಬೆಂಗಳೂರು, ನ.13(Daijiworld News/SS): ಇಂದು ಸುಪ್ರೀಂ ಕೋರ್ಟಿನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯಲಿದೆ. 15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 5 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಸ್ಪರ್ಧಿಸುವ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡಲಿದೆ.
ಚುನಾವಣೆ ಮುಂದೂಡುವಂತೆ ಕೋರಿ ಅನರ್ಹ ಶಾಸಕರು ಅರ್ಜಿ ಸಲ್ಲಿಸಲಿದ್ದು, ಇದನ್ನು ತಕ್ಷಣವೇ ವಿಚಾರಣೆಗೆ ಅಂಗೀಕರಿಸಲು ಸುಪ್ರೀಂಕೋರ್ಟ್ ತೀರ್ಮಾನಿಸಿದೆ. ಹುಣಸೂರು, ಕೆ.ಆರ್.ಪೇಟೆ, ಮಹಾಲಕ್ಷ್ಮೀ ಲೇಔಟ್, ಯಶವಂತಪುರ, ಕೆ.ಆರ್.ಪುರಂ, ಗೋಕಾಕ್, ಕಾಗವಾಡ ಸೇರಿದಂತೆ 15 ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆ ಮುಂದೂಡುವಂತೆ ಕಳೆದ ವಾರ ಅನರ್ಹ ಶಾಸಕರ ಪರ ವಕೀಲರು ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದರು.
ಆದರೆ ಉಪಚುನಾವಣೆಯನ್ನು ಮುಂದೂಡಲು ಸುಪ್ರೀಂಕೋರ್ಟ್ ನಕಾರ ವ್ಯಕ್ತಪಡಿಸಿದ್ದಲ್ಲದೆ ನಿಮಗಾಗಿ ಆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು. ಆದರೆ ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ತೀರ್ಪು ನೀಡಲಿದ್ದು, ಅಂದೇ ಅರ್ಜಿ ಸಲ್ಲಿಸಿ, ವಿಚಾರಣೆ ನಡೆಸೋಣ ಎಂದು ಕೋರ್ಟ್ ಸೂಚನೆ ನೀಡಿತ್ತು.
ಇಂದು ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಪ್ರಕಟವಾಗಲಿದ್ದು, ಅದೇ ಕಾಲಕ್ಕೆ ಚುನಾವಣೆ ಮುಂದೂಡುವಂತೆ ಶಾಸಕರು ಮಾಡಿಕೊಳ್ಳಲಿರುವ ಮನವಿಗೆ ಸಂಬಂಧಿಸಿದ ವಿಚಾರಣೆಯೂ ನಡೆಯಲಿದೆ.