ಬೆಂಗಳೂರು, ನ13 (Daijiworld News/ MB): ಮೋದಿ ಮಹಾರಾಷ್ಟ್ರದ ಪ್ರಜಾಪ್ರಭುತ್ವವನ್ನೇ ಭಸ್ಮ ಮಾಡುತ್ತಿರುವ ಆಧುನಿಕ ಭಸ್ಮಾಸುರ ಎಂದು ಮೋದಿ ವಿರುದ್ಧ ವಿ.ಎಸ್. ಉಗ್ರಪ್ಪ ಕಿಡಿಕಾರಿದ್ದಾರೆ.
ನವೆಂಬರ್ 12 ರ ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾನಾಡಿದ ಅವರು, 'ಮಹಾರಾಷ್ಟ್ರ ಎರಡನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಪಕ್ಷಕ್ಕೆ ಸರಕಾರ ರಚಿಸುವ ಅವಕಾಶ ನೀಡುತ್ತಿಲ್ಲ. ಚುನಾವಣೆಯ ಪೂರ್ವ ಒಪ್ಪಂದವನ್ನು ಬಿಜೆಪಿ ಉಲ್ಲಂಘನೆ ಮಾಡಿದೆ ಎಂಬ ಕಾರಣಕ್ಕೆ ಶಿವಸೇನೆ ಮೈತ್ರಿಕೂಟದಿಂದ ಹೊರಬಂದಿದೆ. ಆದರೆ ಬೇರೆ ಮೈತ್ರಿ ನಡೆಸಿ ಸರಕಾರ ರಚಿಸುವ ಅವಕಾಶವನ್ನೇ ನೀಡುತ್ತಿಲ್ಲ' ಎಂದು ದೂರಿದರು.
'ರಾಜ್ಯಪಾಲರು ಒಮ್ಮಲೇ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿರುವುದು ಮೋದಿ ಮತ್ತು ಅಮಿತ್ ಶಾ ಅವರ ತಂತ್ರಗಾರಿಕೆಯಾಗಿದ್ದು ರಾಜ್ಯಪಾಲರನ್ನು ಕೇಂದ್ರ ಸರಕಾರವನ್ನು ದುರ್ಬಳಕೆ ಮಾಡುತ್ತಿದ್ದಾರೆ. ರಾಜ್ಯಪಾಲರು ಕೇಂದ್ರ ಏಜೆಂಟ್ ನಂತೆ ವರ್ತಿಸುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮಾತಾನಾಡಿದ ಉಗ್ರಪ್ಪನವರು, 'ಅನರ್ಹ ಶಾಸಕರ ಸಮಾರಂಭಗಳಲ್ಲಿ ಮುಖ್ಯಮಂತ್ರಿಯವರೇ ಖುದ್ದಾಗಿ ಭಾಗವಹಿಸಿ, ಅವರ ಪರ ಮತಯಾಚಿಸುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಅನರ್ಹ ಶಾಸಕರಿಗೆ ಪಕ್ಷದ ಟಿಕೆಟ್ ನೀಡಲು ಮುಂದಾಗಿದ್ದಾರೆ' ಎಂದು ಹೇಳಿದರು.
'ಅನರ್ಹ ಶಾಸಕರಿಗೂ ನಮಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪರವರ ಬಣ್ಣ ಬಿಜೆಪಿಯ ಸಮಿತಿ ಸಭೆಯಲ್ಲಿ ಮಾತಾನಾಡಿದ ವೈರಲ್ ಆದ ವಿಡಿಯೋದಲ್ಲಿ ಈಗಾಗಲೇ ಬಯಲಾಗಿದೆ. ಅನರ್ಹ ಶಾಸಕರ ಪರ ತೀರ್ಪು ಬರಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ' ಎಂದು ಉಗ್ರಪ್ಪ ತಿಳಿಸಿದರು.