ಬೆಂಗಳೂರು, ನ.13(Daijiworld News/SS): ಅನರ್ಹ ಶಾಸಕರ ತೀರ್ಪು ಸುಪ್ರೀಂಕೋರ್ಟ್ನಲ್ಲಿ ಪ್ರಕಟವಾಗಲಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಪಿನ ಬಗ್ಗೆ ಹೆಚ್ಚು ಗಮನ ಹರಿಸಿದ್ದು, ಮಧ್ಯಾಹ್ನ 3 ಗಂಟೆ ತನಕ ಯಾವುದೇ ಕಾರ್ಯಕ್ರಮವನ್ನು ನಿಗದಿ ಮಾಡಿಕೊಂಡಿಲ್ಲ ಎಂದು ತಿಳಿದುಬಂದಿದೆ.
ಸುಪ್ರೀಂಕೋರ್ಟ್ ತೀರ್ಪು ಬಂದ ಬಳಿಕ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದೆ. ಡಿಸೆಂಬರ್ 5ರಂದು ನಡೆಯುವ 15 ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಭೆಯನ್ನು ನಡೆಸಲಾಗುತ್ತಿದೆ. ಒಂದೆಡೆ ಅನರ್ಹ ಶಾಸಕರು ಬಿಜೆಪಿ ಸೇರುವುದಕ್ಕೆ, ಉಪ ಚುನಾವಣೆ ಟಿಕೆಟ್ ಅವರಿಗೆ ನೀಡುವುದಕ್ಕೆ ಪಕ್ಷದಲ್ಲಿಯೇ ವಿರೋಧವಿದೆ. ಹೀಗಾಗಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದೆ.
ಸ್ಪೀಕರ್ ಆದೇಶ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಯ ತೀರ್ಪು ಇಂದು ಪ್ರಕಟಗೊಳ್ಳಲಿದ್ದು, ನ್ಯಾಯಾಲಯ ನೀಡುವ ತೀರ್ಪಿನ ಮೇಲೆ ಅನರ್ಹ ಶಾಸಕರ ಭವಿಷ್ಯ ನಿಂತಿದೆ.
ನ್ಯಾ. ಎನ್.ವಿ. ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ಅವರಿರುವ ತ್ರಿಸದಸ್ಯ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈಗಾಗಲೇ ಎರಡು ಕಡೆ ವಕೀಲರಿಂದ ವಾದ-ಪ್ರತಿವಾದಗಳನ್ನು ಆಲಿಸಿರುವ ನ್ಯಾಯಾಲಯದ ತೀರ್ಪನ್ನು ಕಾಯ್ದಿರಿಸಿದ್ದು, ಇಂದು ಪ್ರಕಟಿಸಲಿದೆ.