ಬೆಂಗಳೂರು, ನ.13(Daijiworld News/SS): ಅನರ್ಹ ಶಾಸಕರ ಪ್ರಕರಣದ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮೈತ್ರಿ ಸರ್ಕಾರ ಬೀಳಿಸುವಲ್ಲಿ ಬಿಜೆಪಿ ಕೈವಾಡ ಈಗ ಸ್ಪಷ್ಟವಾಗಿದೆ. ಇದರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಬಿಜೆಪಿಗೆ ನೈತಿಕತೆ ಇದ್ದರೆ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬಾರದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಪಕ್ಷಾಂತರಗೊಂಡ ಎಲ್ಲ 17 ಶಾಸಕರ ಅನರ್ಹತೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಕರ್ನಾಟಕ ಬಿಜೆಪಿ ಸರ್ಕಾರ ಅಕ್ರಮ ಸರ್ಕಾರ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಬಹುಮತವನ್ನು ರೂಪಿಸಲು ಬಿಜೆಪಿ ಅಸಂವಿಧಾನಿಕ ವಿಧಾನಗಳನ್ನು ಬಳಸಿಕೊಂಡಿದೆ. ಬಿಜೆಪಿ ಸರ್ಕಾರವನ್ನು ತಕ್ಷಣ ವಜಾಗೊಳಿಸಬೇಕು ಎಂದು ದೂರಿದರು.