ನವದೆಹಲಿ, ನ13 (Daijiworld News/ MB): ಹದಿನೇಳು ಮಂದಿ ಅನರ್ಹ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನ ತೀರ್ಪು ಹೊರಬಿದ್ದಿದೆ. ಈ ಬೆನ್ನಲೆ ಪ್ರಸಿದ್ಧ ನಟ ಹಾಗೂ ಪ್ರಗತಿಪರ ಚಿಂತಕ ಪ್ರಕಾಶ್ ರೈ ಅತೃಪ್ತ ಶಾಸಕರ ವಿರುದ್ಧ ಕಿಡಿಕಾರಿದ್ದಾರೆ.
‘ಹಾವೂ ಸಾಯ್ಬಾರ್ದು ಕೋಲು ಮುರಿಬಾರ್ದು ಅನ್ನುವ ಹಾಗೆ ಇರುವ ತೀರ್ಪು ಹೊರಬಂದಿದೆ. ಈಗ ಕನ್ನಡಿಗರು ಚುನಾವಣೆಯಲ್ಲಿ ಮರೆಯಲಾಗದ ತೀರ್ಪು ನೀಡಬೇಕು. ಇದು ನಮ್ಮ ಜವಾಬ್ದಾರಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲೆ ತೀವ್ರ ಕುತೂಹಲ ಮೂಡಿಸಿದ್ದ ಅನರ್ಹ ಶಾಸಕರ ವಿವಾದಕ್ಕೆ ತೆರೆಬಿದಿದ್ದು, ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದ್ದಾರೆ.
ಈ ತೀರ್ಪಿನಂತೆ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಗೆ ಸುಪ್ರೀಂಕೋರ್ಟ್, ‘ಸ್ಪೀಕರ್ ಕೆಲಸ ರಾಜೀನಾಮೆ ಸ್ವೀಕಾರ ಮಾಡುವುದಷ್ಟೇ. ಶಾಸಕರ ರಾಜೀನಾಮೆ ಸ್ವಯಂ ಪ್ರೇರಿತವಾಗಿದ್ದರೆ ಅದನ್ನು ಅಂಗೀಕಾರ ಮಾಡಬೇಕು. ರಾಜೀನಾಮೆ ಅನರ್ಹವಾದರೂ ಅಂಗೀಕಾರವಾದರೂ ಶಾಸಕ ಸ್ಥಾನ ಖಾಲಿಯಾಗಿರುವುದರಿಂದ ಚುನಾವಣೆ ನಡೆಯಲೇಬೇಕ’ ಎಂದು ಹೇಳಿ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಆದೇಶವನ್ನು ತಿರಸ್ಕಾರ ಮಾಡಿದೆ.
ಸ್ಪೀಕರ್ ರಮೇಶ್ ಕುಮಾರ್ 2023ರವರೆಗೆ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದರು.
‘ಶಾಸಕರ ಅನರ್ಹತೆ ಕೇವಲ ಉಪಚುನಾವಣೆ ನಡೆಯುವವರೆಗೆ ಮಾತ್ರ ಇರುತ್ತದೆ. ವಿಧಾನಸಭೆ ಅವಧಿ ಮುಗಿಯುವವರೆಗೆ ಅಲ್ಲ. ಶಾಸಕರ ಅನರ್ಹತೆಗೆ ಅವಧಿ ನಿರ್ಧಾರ ಮಾಡುವ ಹಾಗಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ನಂತರ ಮಂತ್ರಿಯಾಗಬಹುದು’ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.