ತೆಲಂಗಾಣ, ನ13 (Daijiworld News/ MB): ಮಗನನ್ನೇ ಪೋಷಕರು ಜೀವಂತವಾಗಿ ದಹಿಸಿದ ಘಟನೆ ನವೆಂಬರ್ 12 ರ ಮಂಗಳವಾರ ಇಲ್ಲಿನ ವಾರಂಗಲ್ ಜಿಲ್ಲೆಯ ಮುಸ್ತಯಪಳ್ಳಿ ಗ್ರಾಮದಲ್ಲಿ ನಡೆದಿದೆ.
ವಾರಂಗಲ್ ಮಾರುಕಟ್ಟೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಮೃತ ವ್ಯಕ್ತಿ ಮಹೇಶ್ ಚಂದ್ರ (42) ದಿನ ನಿತ್ಯ ಅತಿಯಾಗಿ ಮದ್ಯಪಾನ ಮಾಡಿ ಹಣಕ್ಕಾಗಿ ಮನೆಯವರನ್ನು ಪೀಡಿಸುತ್ತಿದ್ದ. ಇದರಿಂದ ಬೇಸತ್ತ ಪೋಷಕರಾದ ಕೆ.ಪ್ರಭಾಕರ್ ಮತ್ತು ವಿಮಲಾ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
'ಮಹೇಶ್ ದಿನ ನಿತ್ಯ ಮದ್ಯಪಾನ ಮಾಡಿ ಹಣಕ್ಕಾಗಿ ಪೀಡುಸುತ್ತಿದ್ದ ಮಾತ್ರವಲ್ಲದೇ ಮದ್ಯಪಾನದ ಮತ್ತಲ್ಲಿ ಪೋಷಕರ ಮೇಲೆ ಹಲ್ಲೆ ಮಾಡುತ್ತಿದ್ದ . 2 ತಿಂಗಳ ಹಿಂದೆ ಆತನ ಪತ್ನಿ ತವರು ಮನೆಗೆ ಹೋಗಿದ್ದು ಅಂದಿನಿಂದ ಆತ ಪೋಷಕರಲ್ಲಿ ಹಣಕ್ಕಾಗಿ ನಿತ್ಯ ಸತಾಯಿಸುತ್ತಿದ್ದ. ನವೆಂಬರ್ 12 ರ ಮಂಗಳವಾರ ರಾತ್ರಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದ ಆತ ಪೋಷಕರ ಮೇಲೆ ಹಲ್ಲೆಗೈಯ್ಯಲು ಆರಂಭಿಸಿದ್ದ. ಹಿಂಸೆ ತಾಳಲಾರದ ಪೋಷಕರು ಆತನನ್ನು ಜೀವಂತವಾಗಿ ದಹನ ಮಾಡಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.
ಇದಲ್ಲದೇ ಆತ ಆಸ್ತಿಗಾಗಿ ಪೋಷಕರಿಗೆ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ.
ಘಟನೆ ನಡೆದ ಸ್ಥಳಕ್ಕೆ ದಮೇರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಶವವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿ ಪೋಷಕರನ್ನು ಬಂಧಿಸಿದ್ದಾರೆ.