ಬೆಂಗಳೂರು, ನ.13(Daijiworld News/SS): ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಹಳೆಯ ಸ್ಪೀಕರ್ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸುತ್ತಾರೆ. ಇದರರ್ಥ ಏನೂ ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಕುಮಾರಸ್ವಾಮಿ ಮಾತನಾಡುತ್ತಾರೆ. 17 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ ಎಂದು ಕುಮಾರಸ್ವಾಮಿಯವರೇ ಹೇಳಿದ್ದಾರೆ. ಅದರ ಬಗ್ಗೆ ಎಚ್ಡಿಕೆ ತೀರ್ಮಾನ ಮಾಡುತ್ತಾರೆ. 17 ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ನಿಶ್ಚಿತ ಎಂದು ಹೇಳಿದರು.
ಮೂರೂವರೆ ವರ್ಷ ಪಕ್ಷ ಸಂಘಟನೆ ಮಾಡುತ್ತೇವೆ. ನಾವು ಮತ್ತೆ ಕಾಂಗ್ರೆಸ್ ಜೊತೆ ದೋಸ್ತಿ ಮಾಡುವುದಿಲ್ಲ. ಯಡಿಯೂರಪ್ಪ ಮೂರೂವರೆ ವರ್ಷ ಸೇಫ್ ಆಗಿರುತ್ತಾರೆ. ಉಪ ಚುನಾವಣೆಯಲ್ಲಿ 17 ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳೇ ಗೆದ್ದರೂ ಅವರಿಗೆ ಸಚಿವರನ್ನಾಗಿ ಮಾಡುವ ಹಾಗಿಲ್ಲ. ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಕೊಡುವ ಹಾಗಿಲ್ಲ. ಕೇವಲ ಶಾಸಕರಾಗಿ ಇರಬಹುದು. ಆಗ ಮೂಲ ಬಿಜೆಪಿಗರನ್ನೇ 27 ಜನರನ್ನು ಮಂತ್ರಿಗಳನ್ನಾಗಿ ಮಾಡಬಹುದು ಎಂದು ತಿಳಿಸಿದರು.