ಚೆನ್ನೈ, ನ 13 (Daijiworld News/MSP): ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಮದ್ರಾಸ್ನಲ್ಲಿ ಟಾಪರ್ ಆಗಿದ್ದ ವಿದ್ಯಾರ್ಥಿನಿ ಫಾತಿಮಾ ಲತೀಫ್ (19) ಅನುಮಾನಾಸ್ಪದ ಸಾವಿನ ಶಂಕೆ ವ್ಯಕ್ತಪಡಿಸಿ ಆಕೆಯ ಪೋಷಕರು ಮಗಳ ಸಾವಿನ ಹಿಂದೆ ಪ್ರೊಫೆಸರ್ ಕೈವಾಡವಿದೆ ಎಂದು ಆರೋಪಿಸಿ ನ್ಯಾಯಯುತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಕೇರಳದ ಕೊಲ್ಲಂ ಮೂಲದವಳಾದ ಐಐಟಿ ಮದ್ರಾಸ್ನ ಪ್ರಥಮ ವರ್ಷದ 18 ವರ್ಷದ ವಿದ್ಯಾರ್ಥಿನಿ ಫಾತಿಮಾ ಲತೀಫ್ ಮೂರು ದಿನಗಳ ಹಿಂದೆ ಸಾವಿಗೀಡಾಗಿದ್ದು, ಆಕೆಯ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಈ ಪ್ರಕರಣವನ್ನು ಪೊಲೀಸರು ಕೂಡಾ ಆತ್ಮಹತ್ಯೆ ಎಂದು ಪರಿಗಣಿಸಿದ್ದರು.
ಫಾತಿಮಾ ಲತೀಫ್, ಒಂದು ವಿಷಯ ಹೊರತುಪಡಿಸಿ ಎಲ್ಲ ಸಬ್ಜೆಕ್ಟ್ನಲ್ಲಿ ಟಾಪರ್ ಆಗಿದ್ದಳು. ಆದರೆ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿರುವ ಪ್ರೊಫೆಸರ್ ಪಾಠ ಮಾಡುತ್ತಿದ್ದ ವಿಷಯದಲ್ಲಿ ಮಾತ್ರ ಆಕೆ ಎರಡನೇ ಟಾಪರ್ ಆಗಿದ್ದಳು.
ತಮಿಳುನಾಡು ಪೊಲೀಸರು ವಿದ್ಯಾರ್ಥಿನಿಯ ಆತ್ಮಹತ್ಯೆ ಎಂದು ದಾಖಲಿಸಿಕೊಂಡಿದ್ದು, ಡೆತ್ ನೋಟ್ ಸಿಕ್ಕಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ, ಫಾತಿಮಾಳ ಪೋಷಕರು , ಮೊಬೈಲ್ ಫೋನ್ನಲ್ಲಿ ದಾಖಲೆ ಇದೆ ಎಂದು ಆರೋಪಿಸಿದ್ದಾರೆ. ಮಗಳು ತನ್ನ ಸ್ಕೀನ್ ಸೇವರ್ ನಲ್ಲಿಯೇ ತನ್ನ ಸಾವಿಗೆ ಪ್ರೊಪೆಸರ್ ಕಾರಣ ಎಂದು ಉಲ್ಲೇಖಿಸಿದ್ದಾಳೆ ಎಂದು ಫಾತಿಮಾರ ತಂದೆ ಲತೀಫ್ ಹೇಳಿಕೊಂಡಿದ್ದಾರೆ. ಆದರೆ ಇದನ್ನು ಪೊಲೀಸರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ. ಪ್ರಸ್ತುತ ವಿದ್ಯಾರ್ಥಿನಿಯ ಮೊಬೈಲ್ ಫೋನ್ ಪೊಲೀಸರ ವಶದಲ್ಲಿದೆ.
ವಿದ್ಯಾರ್ಥಿನಿ ತಂದೆ ಅಬ್ದುಲ್ ಲತೀಫ್ ಸಿಎಂ ಪಿಣರಾಯಿ ವಿಜಯನ್ರನ್ನು ಭೇಟಿ ತಮಿಳುನಾಡು ಪೊಲೀಸರ ತನಿಖೆಯಲ್ಲಿ ರಾಜ್ಯ ಸರಕಾರ ಹಸ್ತಕ್ಷೇಪ ವಹಿಸಬೇಕೆಂದು ಮನವಿ ಸಲ್ಲಿಸಿದ್ದಾರೆ. ಮಾತ್ರವಲ್ಲದೆ ಪ್ರಧಾನಿ ಮೋದಿಗೂ ಮಗಳ ಸಾವಿಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದ್ದಾರೆ.