ಬೆಂಗಳೂರು, ನ.13(Daijiworld News/SS): ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಅನರ್ಹ ಶಾಸಕರ ತೀರ್ಪಿಗೆ ಇಡೀ ದೇಶವೇ ಕಾಯುತ್ತಿತ್ತು. ಸಿದ್ದರಾಮಯ್ಯ, ರಮೇಶ್ ಕುಮಾರ್ ಷಡ್ಯಂತ್ರಕ್ಕೆ ತಕ್ಕ ತೀರ್ಪು ದೊರೆತಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕೋರ್ ಕಮಿಟಿ ಸಭೆ ನಡೆಸಿ, ಟಿಕೆಟ್ ಯಾರಿಗೆ ನೀಡಬೇಕು ಎಂದು ಚರ್ಚೆ ಮಾಡುತ್ತೇವೆ. ಹಾಗೆಯೇ ರಾಷ್ಟ್ರೀಯ ನಾಯಕರ ಬಗ್ಗೆಯೂ ತೀರ್ಮಾನಿಸುತ್ತೇವೆ. ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಸಿದ್ದರಾಮಯ್ಯ ಜೊತೆ ಸೇರಿ ಮಾಡಿದ್ದ ಷಡ್ಯಂತ್ರಕ್ಕೆ ಸುಪ್ರೀಂಕೋರ್ಟ್ ತಕ್ಕ ತೀರ್ಪು ಕೊಟ್ಟಿದೆ ಎಂದು ತಿಳಿಸಿದ್ದಾರೆ.
17 ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ಪೀಕರ್ ಆದೇಶ ಮತ್ತು ಅನರ್ಹ ಶಾಸಕರು ಇಬ್ಬರ ಪರವಾಗೂ ಬಂದಂತಿದೆ. ಸ್ಪೀಕರ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದರೂ ಸಹ ಡಿಸೆಂಬರ್'ನಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿರುವುದು ಶಾಸಕರಿಗೆ ರಿಲೀಫ್ ಸಿಕ್ಕಂತಾಗಿದೆ.