ನವದೆಹಲಿ, ನ 13 (Daijiworld News/ MB): ಸ್ಪೀಕರ್ ರಮೇಶ್ ಕುಮಾರ್ ಅವರ ಅನರ್ಹತೆ ಆದೇಶವನ್ನು ಎತ್ತಿ ಹಿಡಿದಿದ್ದು ಶಾಸಕರು ಅನರ್ಹರಾದರೂ ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದೆಂಬ ತೀರ್ಪುನ್ನು ಸುಪ್ರೀಂಕೋರ್ಟ್ ನೀಡಿದೆ. ಈ ತೀರ್ಪು 17 ಶಾಸಕರ ಪೈಕಿ 15 ಶಾಸಕರಿಗೆ ಖುಷಿ ನೀಡಿದ್ದರೂ ಇನ್ನುಳಿದ ಇಬ್ಬರಿಗೆ ಈ ತೀರ್ಪು ಬಿಸಿ ತುಪ್ಪದಂತಾಗಿದೆ.
ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ ತೀರ್ಪು ನೀಡಿದ್ದು, ಈಗಾಗಲೇ ಚುನಾವಣಾ ಆಯೋಗವು 17ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಡಿಸೆಂಬರ್ 5ರಂದು ಉಪಚುನಾವಣೆ ನಡೆಯುವುದಾಗಿ ಘೋಷಣೆ ಮಾಡಿದೆ.
ಚುನಾವಣಾ ಆಯೋಗ ಮಸ್ಕಿ ಮತ್ತು ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಫಲಿತಾಂಶ ಪ್ರಶ್ನಿಸಿ ಸೋತ ಅಭ್ಯರ್ಥಿಗಳು ಹೈಕೋರ್ಟ್ ಮೊರೆಹೋಗಿದ್ದರು. ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಆ ಎರಡು ಕ್ಷೇತ್ರಗಳಲ್ಲಿ ಚುನಾವಣೆಯನ್ನೇ ಘೋಷಣೆ ಮಾಡಿಲ್ಲ. ಹೀಗಾಗಿ ರಾಜರಾಜೇಶ್ವರಿ ನಗರದ ಮುನಿರತ್ನ ಹಾಗೂ ಮಸ್ಕಿ ಕ್ಷೇತ್ರದ ಪ್ರತಾಪ್ ಗೌಡ ಪಾಟೀಲ್ ಗೆ ಈ ತೀರ್ಪು ಕಂಟಕವಾಗಿ ಪರಿಣಮಿಸಿದೆ.
ಅನರ್ಹ ಶಾಸಕರು ಚುನಾವಣೆಗೆ ನಿಲ್ಲದೆ ಶಾಸಕ ಸ್ಥಾನ ಪಡೆಯಲೂ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಈ ಇಬ್ಬರು ಶಾಸಕರಿಗೆ ಅತ್ತ ಶಾಸಕ ಸ್ಥಾನವು ಇಲ್ಲ, ಇತ್ತ ಉಪಚುನಾವಣೆಗೂ ನಿಲ್ಲುವಂತಿಲ್ಲ. ಚುನಾವಣಾ ಆಯೋಗ ಈ ಎರಡು ಕ್ಷೇತ್ರಗಳ ಚುನಾವಣೆ ನಡೆಸುವ ಆದೇಶ ಹೊರಡಿಸುವವರೆಗೂ ಅನರ್ಹ ಶಾಸಕರಾದ ಮುನಿರತ್ನ ಮತ್ತು ಪ್ರತಾಪ್ ಗೌಡ ಪಾಟೀಲ್ ಕಾಯಬೇಕಿದೆ.