ಬೆಂಗಳೂರು, ನ.14(Daijiworld News/SS): 14 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ. ಈಗಾಗಲೇ ಚರ್ಚೆ ನಡೆದಿದ್ದು, ಅಭ್ಯರ್ಥಿಗಳನ್ನು ಅಂತಿಮ ಮಾಡಿ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಕಾಂಗ್ರೆಸ್ ಅವರು ರಾಜು ಕಾಗೆ ಅವರನ್ನು ಕರೆದುಕೊಂಡು ಬಂದಿದ್ದಾರೆ. ಆದರೆ ನಾವು ಯಾರೊಂದಿಗೂ ಕೈ ಜೋಡಿಸಿದೇ ಚುನಾವಣೆಯಲ್ಲಿ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಮತ್ತು ಬಿಜೆಪಿ ನಮಗೆ ಸಮಾನ ಶತ್ರುಗಳು. ಜೆಡಿಎಸ್ ಅನ್ನು ಅಷ್ಟು ಸುಲಭವಾಗಿ ಪರಿಗಣಿಸಬೇಡಿ ಎಂದು ಎಚ್ಚರಿಸಿದರು.
ಇದೇ ವೇಳೆ ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿಗೆ ನಮ್ಮ ಅವಶ್ಯಕತೆ ಇದ್ದರೆ ಖಂಡಿತವಾಗಿಯೂ ನಾವು ಬೆಂಬಲ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಜೊತೆಗೆ ಪಕ್ಷಾಂತರ ಕಾಯ್ದೆ ರದ್ದು ಮಾಡಿ ಎಂದು ಮನವಿ ಮಾಡಿದ ಅವರು, ಸುಮ್ಮನೆ ಶಾಸಕರಿಗೆ ಭಯ ಬೀಳಿಸುಲು ಪಕ್ಷಾಂತರ ನಿಷೇಧ ಕಾಯ್ದೆ ಏಕೆ ಬೇಕು..? ಸುಮ್ಮನೆ ಎಲ್ಲಿರಿಗೂ ಮುಕ್ತವಾಗಿ ಅವಕಾಶ ನೀಡುವುದು ಒಳ್ಳೆಯದು. ಈ ಕಾಯ್ದೆ ತಂದ ಉದ್ದೇಶ ಸರಿಯಾಗಿಲ್ಲ. ಕೇವಲ ಕಾನೂನು ರಚನೆ ಮಾಡಿ ಅದು ಸರಿಯಾಗಿ ಅನುಷ್ಠಾನ ಆಗಿಲ್ಲ ಎಂದರೆ ಹೇಗೆ..? ಸದ್ಯದ ಸ್ಥಿತಿಯಲ್ಲಿ ನಾವು ಅನಿವಾರ್ಯವಾಗಿ ನ್ಯಾಯಾಲಯದ ತೀರ್ಪು ಸ್ವಾಗತ ಮಾಡಲೇಬೇಕು. ಈ ಕಾನೂನು ವ್ಯವಸ್ಥೆಗೆ ಅರ್ಥವೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.