ಬೆಂಗಳೂರು, ನ.14(Daijiworld News/SS): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನೊಂದಿಗೆ ರಾಜಕೀಯ ಮಾಡುವಾಗ ಸಿದ್ದರಾಮಯ್ಯಗೆ ಸೆಕ್ಯುಲರಿಸಂ ಗೊತ್ತಿರಲಿಲ್ಲವೇ..? ಸಿದ್ದರಾಮಯ್ಯ ಯಾರು..? ಅವರು ಎಲ್ಲಿಂದ ಬಂದರು ಎಂಬುದನ್ನೆಲ್ಲಾ ಸದ್ಯದಲ್ಲಿಯೇ ಹೇಳುತ್ತೇನೆ ಎಂದು ಕಿಡಿ ಕಾರಿದ್ದಾರೆ.
ಜೆಡಿಎಸ್ಗೆ ಸೆಕ್ಯುಲರಿಸಂ ಎಲ್ಲಿದೆ ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ನಾವು ನಮ್ಮ ಜಾತ್ಯತೀತತೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ವರ್ಗಾಯಿಸಿದ್ದೇವೆ. ಅವರ ಬಳಿಯಿಂದ ನಮ್ಮ ಸೆಕ್ಯುಲರಿಸಂ ವಾಪಸ್ ಪಡೆಯುವ ಕಾಲ ಬರಲಿದೆ ಎಂದು ಹೇಳಿದರು.
ತಮಿಳುನಾಡಿನಲ್ಲಿ ಜಾತ್ಯತೀತತೆ ಬಗ್ಗೆ ಮಾತನಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರೇ ಆರು ವರ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದರು. ಇಂತಹ ಕರುಣಾನಿಧಿ ಅವರ ಮನೆಗೆ ಕಾಂಗ್ರೆಸ್ ನಾಯಕರು ಹೋಗಿರಲಿಲ್ಲವೇ..? ಕರುಣಾನಿಧಿ ಜತೆ ಮೈತ್ರಿ ಮಾತುಕತೆ ನಡೆಸಿರಲಿಲ್ಲವೇ..? ಎಂದು ವ್ಯಂಗ್ಯವಾಗಿ ಪ್ರಶ್ನಸಿದ್ದಾರೆ.