ನವದೆಹಲಿ, ನ.14(Daijiworld News/SS): ರಫೇಲ್ ಡೀಲ್ ಸಂಬಂಧ ಮೋದಿ ಸರ್ಕಾರಕ್ಕೆ ಕ್ಲೀನ್ಚಿಟ್ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ತೀರ್ಪನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಫ್ರಾನ್ಸ್ ಜತೆಗಿನ ರಾಫೇಲ್ ಯುದ್ಧ ವಿಮಾನ ಖರೀದಿ ಸರಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿತ್ತು. ಆದರೆ ಈ ತೀರ್ಪಿನ ವಿರುದ್ಧ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ನಾ, ಅರುಣ್ ಶೌರಿ, ವಕೀಲ ಪ್ರಶಾಂತ್ ಭೂಷಣ್, ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ಈ ಹಿಂದೆಯೂ ಬಹುಕೋಟಿ ರಫೇಲ್ ಯುದ್ಧ ವಿಮಾನ ಖರೀದಿ ಹಗರಣದ ಸಂಬಂಧ ತನಿಖೆಗೆ ಆದೇಶ ನೀಡಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಈ ಮೂಲಕ ಪ್ರಧಾನಿ ಮೋದಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಕಾಂಗ್ರೆಸ್ಸಿಗೆ ಭಾರೀ ಮುಖಭಂಗವಾಗಿತ್ತು. ಇದೀಗ ಮತ್ತೆ ಮೋದಿ ಸರ್ಕಾರಕ್ಕೆ ಕ್ಲೀನ್ಚಿಟ್ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ತೀರ್ಪನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.