ಬೆಂಗಳೂರು, ನ.14(Daijiworld News/SS): ನಾನು ಸಿಎಂ ಆಗಲು ಅನರ್ಹ ಶಾಸಕರು ಎಲ್ಲವನ್ನು ತ್ಯಾಗ ಮಾಡಿದ್ದಾರೆ. ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಉಪಚುನಾವಣೆಯಲ್ಲಿ 15 ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರುತ್ತೇವೆ. ಪಕ್ಷದ ಎಲ್ಲ ಮುಖಂಡರುಗಳು ಹಾಗೂ ಕಾರ್ಯಕರ್ತರು ಇದಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು. ಯಾವುದೇ ಕಾರಣಕ್ಕೂ ಅವರಿಗೆ ಅನ್ಯಾಯ ಮಾಡಲ್ಲ ಎಂದು ಅನರ್ಹ ಶಾಸಕರಿಗೆ ಭರವಸೆ ಕೊಟ್ಟಿದ್ದಾರೆ.
ಸದ್ಯ ಅನರ್ಹ ಶಾಸಕರು ಅಧಿಕೃತವಾಗಿ ಭಾರತೀಯ ಜನತಾ ಪಕ್ಷ ಸೇರಿದ್ದಾರೆ. ಎಲ್ಲರಿಗೂ ಬಿಜೆಪಿ ಬಾವುಟ ನೀಡಿ ಸ್ವಾಗತ ಕೋರಲಾಯಿತು. ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್, ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆಗೊಂಡರು.
ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂಭಾಗದ ಬೃಹತ್ ವೇದಿಕೆಯ ಮೇಲೆ ಕೇಸರಿ ಶಾಲು ಹೊದ್ದು ಮಿಂಚುತ್ತಿದ್ದ ಅನರ್ಹ ಶಾಸಕರು ಒಬ್ಬೊಬ್ಬರಾಗಿಯೇ ಬಂದು ಬಿಎಸ್ ವೈಯಿಂದ ಪಕ್ಷದ ಬಾವುಟ ಸ್ವೀಕರಿಸಿ, ಮುರಳೀಧರ್ ರಾವ್, ನಳೀನ್ ಕುಮಾರ್ ಕಟೀಲ್'ರವರು ಎಲ್ಲರ ಕೈ ಕುಲುಕಿ ಸ್ವಾಗತಿಸಿದರು.