ಬೆಂಗಳೂರು, ನ 05 (DaijiworldNews/SM): ಮೈತ್ರಿ ಸರಕಾರದ ವಿರುದ್ಧ 17 ಶಾಸಕರು ಸಿಡಿದೆದ್ದ ಪರಿಣಾಮದಿಂದ ನಾನು ಇಂದು ಸಿಎಂ ಆಗಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಅನರ್ಹಗೊಂಡು ಬಿಜೆಪಿ ಸೇರ್ಪಡೆಗೊಂಡಿರುವವರು ಭಾವಿ ಶಾಸಕರು ಹಾಗೂ ಮುಂದಿನ ಸಚಿವರು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಅನರ್ಹ ಶಾಸಕರ ಪೈಕಿ 16 ಅನರ್ಹ ಶಾಸಕರನ್ನು ಅಧಿಕೃತವಾಗಿ ಬಿಜೆಪಿಗೆ ಬರಮಾಡಿಕೊಂಡ ನಂತರ ಮಾತನಾಡಿದ ಸಿಎಂ ಯಡಿಯೂರಪ್ಪ, 17 ಅನರ್ಹ ಶಾಸಕರ ತ್ಯಾಗದಿಂದ ನಾನು ಸಿಎಂ ಆಗಿದ್ದೇನೆ. ಅನರ್ಹರಲ್ಲಿ ಕೆಲವರು ಸಚಿವ ಸ್ಥಾನವನ್ನು ತೊರೆದು ಬಂದಿದ್ದಾರೆ. ಹೀಗಾಗಿ ರಾಜೀನಾಮೆ ಕೊಟ್ಟು ನಮ್ಮ ಜೊತೆಗೆ ಬಂದ ಎಲ್ಲಾ 17 ಶಾಸಕರಿಗೆ ನಾವು ಕೊಟ್ಟ ಭರವಸೆಯನ್ನು ಈಡೇರಿಸುತ್ತೇವೆ. ವಿಶ್ವಾಸ ದ್ರೋಹ ಮಾಡಲ್ಲ ಎಂದು ಹೇಳುವ ಮೂಲಕ ಅನರ್ಹ ಶಾಸಕರಿಗೆ ಸಚಿವ ಸ್ಥಾನ ಖಚಿತ ಎಂಬುವುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಇಂದು ಬಿಜೆಪಿ ಸೇರ್ಪಡೆಗೊಂಡ ಅನರ್ಹ ಶಾಸಕರು ಬಿಜೆಪಿಯ ಭಾವಿ ಶಾಸಕರು ಹಾಗೂ ಸಚಿವರು ಎಂದು ಅವರು ಹೇಳಿದ್ದಾರೆ. ಇಷ್ಟೊಂದು ಮಂದಿ ಒಂದು ಪಕ್ಷವನ್ನು ಬಿಟ್ಟುಬಂದ ಉದಾಹರಣೆಗಳು ಈ ಹಿಂದೆ ನಡೆದಿಲ್ಲ. ಬಿಜೆಪಿಗಾಗಿ ತ್ಯಾಗ ಮಾಡಿದ ಎಲ್ಲಾ ಶಾಸಕರಿಗೂ ಸೂಕ್ತವಾದ ಸ್ಥಾನಮಾನ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.