ನವದೆಹಲಿ, ನ.15(Daijiworld News/SS): ಮಾಜಿ ಸಚಿವ ಡಿ.ಕೆ ಶಿವಕುಮಾರ್ ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.
ದೆಹಲಿ ಹೈಕೋರ್ಟ್ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಇಡಿ ಸುಪ್ರೀಂಕೋರ್ಟ್'ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಮತ್ತು ಇಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡುವಂತೆ ಡಿ.ಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಲಿದೆ.
ನ್ಯಾ. ಆರ್.ಎಫ್.ನಾರಿಮನ್ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ಈ ವಿಚಾರಣೆ ನಡೆಯಲಿದೆ. ದೆಹಲಿ ಹೈಕೋರ್ಟ್'ನಲ್ಲಿ ಇಡಿ ಪರ ವಾದ ಮಂಡಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ ನಟರಾಜ್, ಪ್ರಕರಣ ಇನ್ನು ತನಿಖಾ ಹಂತದಲ್ಲಿರುವ ಕಾರಣ ಸಾಕ್ಷಿ ನಾಶ ಮಾಡುವ ಸಾಧ್ಯತೆಗಳಿದೆ. ಪ್ರಕರಣ ಸಾಕಷ್ಟು ಆಳವಾಗಿ ತನಿಖೆ ಆಗಬೇಕಿದ್ದು ಡಿ.ಕೆ ಶಿವಕುಮಾರ್ ಜೈಲಿಂದ ಹೊರಗಿದ್ದಲ್ಲಿ ತನಿಖೆಗೆ ತೊಂದರೆ ಆಗಬಹುದು ಅಂತಾ ಆರೋಪ ಮಾಡಿದ್ದರು.
ಈ ವೇಳೆ ಡಿ.ಕೆ.ಶಿವಕುಮಾರ್ ಪರ ಪ್ರತಿವಾದ ಮಂಡಿಸಿದ್ದ ವಕೀಲ ಅಭಿಷೇಕ ಮನುಸಿಂಘ್ವಿ, ಆರೋಗ್ಯ ದೃಷ್ಟಿಯಿಂದ ಜಾಮೀನು ನೀಡಬೇಕು. ಜಾಮೀನಿಗಾಗಿ ಯಾವುದೇ ಕಂಡಿಷನ್ ಫಾಲೋ ಮಾಡಲು ಸಿದ್ಧ. ಅಲ್ಲದೇ ತನಿಖೆಗೆ ಪೂರ್ಣ ಪ್ರಮಾಣದ ಸಹಕಾರ ನೀಡುವ ಭರವಸೆ ನೀಡಿದ್ದರು. ಇದೀಗ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.