ಬೆಂಗಳೂರು, ನ.15(Daijiworld News/SS): ಮತ್ತೊಮ್ಮೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವ ಯೋಜನೆಯನ್ನು ಕೈಗೊಂಡಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಂ ಲ್ಯಾಂಡರ್ ಇಳಿಸುವ ತನ್ನ ಮಹಾತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆ ವಿಫಲವಾದ ನಂತರ, ತಿರುವನಂತಪುರ ಮೂಲದ ವಿಕ್ರಮ್ ಸಾರಾಬಾಯಿ ಅಂತರಿಕ್ಷ ಕೇಂದ್ರದ ನಿರ್ದೇಶಕ ಎಸ್ ಸೋಮನಾಥ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ಇಸ್ರೋ ರಚಿಸಿದೆ. ಈ ಕೇಂದ್ರ ಇಸ್ರೊದ ಎಲ್ಲಾ ಉಡಾವಣಾ ವಾಹಕ ಯೋಜನೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಅದು ಮುಂದಿನ ವರ್ಷ ನವೆಂಬರ್ ತಿಂಗಳಿನಲ್ಲಿ ಚಂದ್ರಯಾನ-3 ಯೋಜನೆಯನ್ನು ಕೈಗೊಳ್ಳಲಿದೆ ಎಂದು ತಿಳಿಸಿದೆ.
ಲ್ಯಾಂಡರ್ ಚಂದ್ರನ ಮೇಲ್ಮೈನಲ್ಲಿ ಯಶಸ್ವಿಯಾಗಿ ಇಳಿಯಲು ಕಾಲುಗಳನ್ನು ಗಟ್ಟಿಗೊಳಿಸಲಾಗುವುದು. ಇದರಿಂದ ಹೆಚ್ಚು ವೇಗದಲ್ಲಿ ಲ್ಯಾಂಡರ್ ಚಂದ್ರನಲ್ಲಿ ಇಳಿದರೂ ಹಾನಿಯಾಗದು. ಹೊಸ ಲ್ಯಾಂಡರ್ ಹಾಗೂ ರೋವರ್ ನಿರ್ಮಾಣ ಮಾಡಲಾಗುತ್ತದೆ. ಆದರೆ ಪೇಲೋಡ್ಗಳ ಸಂಖ್ಯೆಯನ್ನು ನಿರ್ಧರಿಸಲಾಗಿಲ್ಲ ಎಂದು ವಿಜ್ಞಾನಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸದ್ಯ ಸೋಮನಾಥ್ ಅವರ ನೇತೃತ್ವದ ತಂಡ ವರದಿ ಸಿದ್ದಪಡಿಸುತ್ತಿದ್ದು ಅದಕ್ಕೆ ಮುಂದಿನ ವರ್ಷಾಂತ್ಯದೊಳಗೆ ಯೋಜನೆ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.