ನವದೆಹಲಿ, ನ.15(Daijiworld News/SS): ಇಂದು ಅಧಿಕಾರದಲ್ಲಿರುವವರು ಸತ್ಯದ ಬಗ್ಗೆ ಕುರುಡರಾಗಿದ್ದಾರೆ. ಅವರಲ್ಲಿ ನೆಹರೂರವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಸಾಮರ್ಥ್ಯ, ಬುದ್ದಿವಂತಿಕೆ ಮತ್ತು ದೂರದೃಷ್ಟಿಯ ಕೊರತೆಯಿದೆ. ಕೇಂದ್ರದ ಮೋದಿ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದೂರಿದರು.
ದೇಶದ ವೈವಿಧ್ಯತೆಯನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಅಗೌರವಿಸುತ್ತದೆ. ಮಾತ್ರವಲ್ಲದೆ ಬಹುತ್ವವನ್ನು ಒಪ್ಪದೆ ದೇಶವನ್ನು ಹಿಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ನೆಹರೂ ಅವರ ಪರಂಪರೆಯನ್ನು ಎತ್ತಿಹಿಡಿಯಲು ಮೋದಿ ಸರ್ಕಾರ ಸಾಮರ್ಥ್ಯ, ದೂರದೃಷ್ಟಿ ಮತ್ತು ಬುದ್ದಿವಂತಿಕೆಯ ಕೊರತೆ ಹೊಂದಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವ, ದೃಢ ಜಾತ್ಯತೀತತೆ, ಸಮಾಜವಾದಿ ಅರ್ಥಶಾಸ್ತ್ರ ಮತ್ತು ತಟಸ್ಥ ಅಥವಾ ಅಲಿಪ್ತ ವಿದೇಶಾಂಗ ನೀತಿ ಇವುಗಳು ನಿಜವಾದ ಭಾರತದ ಪ್ರಮುಖ ಅಂಶಗಳಾಗಿವೆ. ಇವು ಜವಾಹರಲಾಲ ನೆಹರೂರವರ ದೂರದೃಷ್ಟಿಯ ನಾಲ್ಕು ಆಧಾರಸ್ಥಂಭಗಳು ಎಂದು ಹೇಳಿದರು.
ಇದೇ ವೇಳೆ ದೇಶದ ಜನತೆ ಕಳೆದ ಆರು ವರ್ಷಗಳ ಧರ್ಮಾಂಧತೆ, ಅನ್ಯಾಯ ಮತ್ತು ದುರುಪಯೋಗ ಆಡಳಿತ ವಿರುದ್ಧ ಒಟ್ಟಾಗಿ ಮಾತನಾಡಬೇಕಿದೆ ಎಂದು ಹೇಳಿದರು.