ತುಮಕೂರು, ನ.15(Daijiworld News/SS): ಯಶಸ್ವಿನಿ ಯೋಜನೆ ಇನ್ನೊಂದು ತಿಂಗಳೊಳಗಾಗಿ ಪುನಾರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಹಾಲು ಒಕ್ಕೂಟದಡಿಯಲ್ಲಿ ತುಮಕೂರು ಜಿಲ್ಲೆಯಲ್ಲಿ ಮೆಗಾಡೈರಿ ನಿರ್ಮಿಸಲು ಚಿಂತನೆ ನಡೆಸಲಾಗುವುದು. ಅಲ್ಲದೇ ತಿಪಟೂರಿನಲ್ಲಿ 100 ಎಕರೆ ಭೂಮಿಯಲ್ಲಿ ತೋಟಗಾರಿಕಾ ಕಾಲೇಜನ್ನು ಆರಂಭ ಮಾಡತ್ತೇನೆ. ಜಿಲ್ಲೆಯ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವುದು ನನ್ನ ಮೊದಲ ಆದ್ಯತೆ ಎಂದು ಹೇಳಿದರು.
ಇದೇ ವೇಳೆ ಸುಮಾರು 25 ಲಕ್ಷ ರೈತರಿಗೆ ಅನುಕೂಲವಾಗುವ ಯಶಸ್ವಿನಿ ಯೋಜನೆಯ ಮತ್ತೊಮ್ಮೆ ಜಾರಿ,ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದ ರೈತ ಸಾಲ ಮನ್ನಾ ಮಾಡುವ ಕಾರ್ಯಕ್ರಮಕ್ಕೆ 1 ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
ರಾಜ್ಯದ ಉತ್ತರ ಭಾಗದಲ್ಲಿ ಅತಿವೃಷ್ಟಿಯಿಂದ 7 ಲಕ್ಷ ಎಕರೆ ಭೂಮಿ ನಾಶವಾಯಿತು. 3-4 ಲಕ್ಷ ಮನೆ ಗಳು ಬಿದ್ದು ಹೋದವು. ನೂರಾರು ಗ್ರಾಮಗಳು ನೀರು ಪಾಲಾದವು. ಜನರು ಬೀದಿಗೆ ಬಿದ್ದರು. ಈ ಸಂಕಷ್ಟಗಳಿಗೆ ಸ್ಪಂದಿಸಲು ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಕೆಲವು ಕಡೆಗಳಲ್ಲಿ ಹೆಚ್ಚಿನ ಗಮನ ಕೊಡಲು ಆಗಲಿಲ್ಲ ಎಂದು ಅವರು ಹೇಳಿದ್ದಾರೆ.