ತಿರುವನಂತಪುರಂ, ನ. 15 (DaijiworldNews/SM): ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಶಬರಿಮಲೆಗೆ ಮಹಿಳೆಯ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಸರಕಾರ ತನ್ನ ದಿಟ್ಟ ನಿರ್ಧಾರ ಪ್ರಕಟಿಸಿದೆ. ಶಬರಿಮಲೆಗೆ ತೆರಳಲು ಮುಂದಾಗುವ ಮಹಿಳೆಯರಿಗೆ ಸರ್ಕಾರದಿಂದ ಯಾವುದೇ ಭದ್ರತೆ ನೀಡುವುದಿಲ್ಲ ಎಂದು ಹೇಳಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಕೇರಳ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್, ಶಬರಿಮಲೆಗೆ ಹೋಗುವ ಮಹಿಳೆಯರಿಗೆ ಸರ್ಕಾರದ ಕಡೆಯಿಂದ ಸಹಮತವಿಲ್ಲ ಎಂಬ ಮಾತನ್ನು ಸಚಿವರು ಸ್ಪಷ್ಟಪಡಿಸಿದ್ದಾರೆ.
ಶಬರಿಮಲೆ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಕಾರ್ಯಕರ್ತರ ಕ್ರೀಯಾವಾದಕ್ಕೆ ಸಂಬಂಧಿಸಿದ ಸ್ಥಳವಲ್ಲ. ಬದಲಿಗೆ ಯಾತ್ರಾಸ್ಥಳ. ಅಯ್ಯಪ್ಪ ಸನ್ನಿಧಿಗೆ ಹೋಗಲು ಇಚ್ಛಿಸುವ ಮಹಿಳೆಯರು ಸುಪ್ರೀಂ ಕೋರ್ಟ್ ಆದೇಶವನ್ನಿಟ್ಟುಕೊಂಡು ಸ್ವಂತದ ಎಚ್ಚರಿಕೆಯಿಂದಲೇ ಹೋಗಬೇಕು ಎಂದರು.
ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಕಾಷ್ಟು ಘರ್ಷಣೆಗಳಾಗಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಹಿಳೆಯರನ್ನು ಶಬರಿಮಲೆಗೆ ಕರೆದುಕೊಂಡು ಹೋಗುವುದಿಲ್ಲ. ಈ ಹಿಂದೆಯೂ ಆ ಕಾರ್ಯ ಮಾಡಿಲ್ಲ. ಇನ್ನು ಮುಂದೆ ಕೂಡ ಮಾಡುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.