ಬೆಂಗಳೂರು, ನ.16(Daijiworld News/SS): ಆದಾಯ ತೆರಿಗೆ ಇಲಾಖೆಯು ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಶಾಕ್ ನೀಡಿದೆ.
ಮೆ.ಎನ್ನೋಬರ್ ಕನ್ಸ್ಟ್ರಕ್ಷನ್ ಕಂಪೆನಿಯ ಪಾಲುದಾರಿಕೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿದೆ. 2007ರಲ್ಲಿ ನಡೆದಿದ್ದ ಆದಾಯ ತೆರಿಗೆ ದಾಳಿ ವೇಳೆ 2005-06ರಲ್ಲಿ ಮೆ.ಎನ್ನೋಬಲ್ ಕನ್ಸ್ಟ್ರಕ್ಷನ್ ಮೂಲಕ ಹೈದರಾಬಾದ್ನ ಲಿಲ್ಲಿಪುರದಲ್ಲಿ 21.80 ಕೋಟಿ ರೂ.ಮೌಲ್ಯದ ಜಮೀನು ಖರೀದಿಸಲಾಗಿತ್ತು. ಆದರೆ, ಅದರ ಆಸ್ತಿ ಮೌಲ್ಯವನ್ನು ಸೇಲ್ ಡೀಲ್ನಲ್ಲಿ 3.05 ಕೋಟಿ ರೂ ಎಂದಷ್ಟೇ ತೋರಿಸುವ ಮೂಲಕ ಆದಾಯ ತೆರಿಗೆ ಇಲಾಖೆಗೆ 18.75 ಕೋಟಿ ರೂ ಕುರಿತು ಮಾಹಿತಿ ನೀಡಿರಲಿಲ್ಲ.
ಈ ಹಿನ್ನೆಲೆ, ತೆರಿಗೆ ವಂಚನೆ ಆರೋಪದಲ್ಲಿ ಜನಾರ್ದನ ರೆಡ್ಡಿ ಮತ್ತು ಎನ್ನೋಬಲ್ನ ನಾಲ್ವರು ಪಾಲುದಾರರ ವಿರುದ್ಧ ಆದಾಯ ತೆರಿಗೆ ಇಲಾಖೆ ಖಾಸಗಿ ದೂರು ಸಲ್ಲಿಸಿದ್ದು, ಸೆಕ್ಷನ್ 276 ಸಿ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ದಾಖಲಿಸಲಾಗಿದೆ. ಡಿ.3ರಂದು ಪ್ರಕರಣವು ವಿಚಾರಣೆಗೆ ಬರಲಿದೆ.