ನವದೆಹಲಿ, ನ.16(Daijiworld News/SS): ಉಭಯ ದೇಶಗಳ ನಡುವೆ ಸೌಹಾರ್ದತೆಯ ಸಂಬಂಧ ನೆಲೆಗೊಳ್ಳದಿರುವುದಕ್ಕೆ ಮುಖ್ಯ ಕಾರಣವೆಂದರೆ ಪಾಕಿಸ್ತಾನ ತನ್ನ ನೆಲದಲ್ಲಿ ಒಂದು ಉಗ್ರ ಕಾರ್ಖಾನೆಯನ್ನು ಸ್ಥಾಪಿಸಿರುವುದು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಪಾಕಿಸ್ತಾನ ಭಾರತದ ವಿರುದ್ಧ ದಾಳಿ ನಡೆಸಲು ಉಗ್ರರನ್ನು ಕಳಿಸುತ್ತಿದೆ. ತನ್ನ ಈ ಸ್ಥಿತಿಯನ್ನು ಪಾಕಿಸ್ತಾನವೇ ಒಪ್ಪಿಕೊಂಡಿದೆ. ಹೀಗಿರುವಾಗ ಸ್ನೇಹಕ್ಕೆ ಕೈಚಾಚಲು ಅದರ ಬಳಿ ಯಾವ ನೈತಿಕತೆ ಇದೆ..? ಎಂದು ಅವರು ಪ್ರಶ್ನಿಸಿದರು.
ಜಾಗತಿಕ ಉಗ್ರ ಮಸೂದ್ ಅಜರ್, ಹಫೀಜ್ ಸಯ್ಯದ್ ಮತ್ತು ಭೂಗತ ದೊರೆ ದಾವೂದ್ ಇಬ್ರಾಹಿಂ ಈ ಮೂವರೂ ಉಗ್ರರೂ ಪಾಕಿಸ್ತಾನದಲ್ಲೇ ಇದ್ದಾರೆ ಎಂಬುದಕ್ಕೆ ಸಾಕ್ಷ್ಯಗಳಿದ್ದರೂ ಪಾಕಿಸ್ತಾನ ಅವರಿಗೆ ರಕ್ಷನೆ ನೀಡುತ್ತಿದ್ದು, ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಹಿಂದೇಟು ಹಾಕುತ್ತಿದೆ ಎಂದು ದೂರಿದರು.
ಭಾರತದೊಂದಿಗೆ ಸ್ನೇಹಯುತ ಸಂಬಂಧವನ್ನು ಇಟ್ಟುಕೊಳ್ಳುವ ಬಗ್ಗೆ ಪಾಕಿಸ್ತಾನ ಗಂಭೀರವಾಗಿ ಯೋಚಿಸುತ್ತದೆ ಎಂದಾದರೆ ಅದು ದಾವೂದ್ ಇಬ್ರಾಹಿಂ, ಹಫೀಜ್ ಸಯ್ಯದ್ ರಂಥ ಮೋಸ್ಟ್ ವಾಂಟೆಡ್ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಹೇಳಿದರು.