ಮುಂಬೈ, ನ 16 (Daijiworld News/MSP): "ಶಬರಿಮಲೆ ಆಕ್ಟಿವಿಸ್ಟ್ ಗಳು ಆಕ್ಟಿವಿಸಂ ಪ್ರದರ್ಶಿಸುವ ಸ್ಥಳವಲ್ಲ, ಇಲ್ಲಿಗೆ ಪ್ರಚಾರ ಪಡೆಯಲು ಬರುವ ಅಗತ್ಯವಿಲ್ಲ. ಈ ಬಾರಿ ದರ್ಶನಕ್ಕೆಂದು ಬರುವ ಮಹಿಳೆಯರಿಗೆ ಯಾವುದೇ ರಕ್ಷಣೆ ಇಲ್ಲ" ಎಂದು ಕೇರಳ ಸರ್ಕಾರ ಸ್ಪಷ್ಟಪಡಿಸಿರುವ ಬೆನ್ನಲ್ಲೇ , ನ.20 ರ ಬಳಿಕ ಶಬರಿಮಲೆ ದೇವಸ್ಥಾನಕ್ಕೆ ತೆರಳುವುದಾಗಿ ಬಲಪಂಥೀಯ ಕಾರ್ಯಕರ್ತೆ ತೃಪ್ತಿ ದೇಸಾಯಿ ಹೇಳಿದ್ದಾರೆ.
ನ. 20ರ ಬಳಿಕ ನಾನು ಶಬರಿಮಲೆ ದರ್ಶನಕ್ಕೆ ತೆರಳುತ್ತೇನೆ. ಇದಕ್ಕಾಗಿ ಕೇರಳ ಸರ್ಕಾರದಿಂದ ರಕ್ಷಣೆ ನೀಡುವಂತೆ ವಿನಂತಿಸಿಕೊಂಡಿದ್ದೇವೆ. ನಮಗೆ ರಕ್ಷಣೆ ನೀಡುವುದು ಬಿಡುವುದು ಕೇರಳ ಸರ್ಕಾರಕ್ಕೆ ಬಿಟ್ಟ ವಿಚಾರ. ರಕ್ಷಣೆ ನೀಡದಿದ್ದರೂ ಶಬರಿಮಲೆಗೆ ಭೇಟಿ ಕೊಡುತ್ತೇನೆ ಎಂದು ತೃಪ್ತಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕೇರಳ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್, :ಅಯ್ಯಪ್ಪ ಸನ್ನಿಧಾನ ಕಾರ್ಯಕರ್ತರಿಗೆ ಪ್ರಚಾರದ ತಾಣವಾಗಬಾರದು, ಪ್ರಚಾರದ ಗೀಳು ಇರುವವರನ್ನು ನಾವು ಪ್ರೋತ್ಸಾಹಿಸುವುದಿಲ್ಲ. ರಕ್ಷಣೆ ಅಗತ್ಯವಿರುವವರು ಸುಪ್ರೀಂ ಕೋರ್ಟಿನಿಂದ ಆದೇಶ ಪಡೆಯಬೇಕು. ದೇವಾಲಯಕ್ಕೆ ಭೇಟಿ ನೀಡುವ ಯಾವುದೇ ಮಹಿಳೆಗೆ ರಾಜ್ಯ ಸರ್ಕಾರ ರಕ್ಷಣೆ ನೀಡುವುದಿಲ್ಲ.ತೃಪ್ತಿ ದೇಸಾಯಿ ಅವರಂಥ ಕಾರ್ಯಕರ್ತರು ತಮ್ಮ ಬಲ ತೋರಿಸುವ ಸ್ಥಳವನ್ನಾಗಿ ದೇವಸ್ಥಾನವನ್ನು ನೋಡಬಾರದು ಎಂದು ಪತ್ರಿಕಾಗೋಷ್ಟಿಯಲ್ಲಿ ಸುರೇಂದ್ರನ್ ಸ್ಪಷ್ಟಪಡಿಸಿದ್ದಾರೆ.
ಸಿಜೆಐ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠದ ಶಬರಿಮಲೆ ವಿವಾದದ ಕುರಿತ ಮೇಲ್ಮನವಿಗಳನ್ನು ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿದ ಮರುದಿನವೇ ಕೇರಳದ ಎಲ್ ಡಿ ಎಫ್ ಸರ್ಕಾರದಿಂದ ಅಯ್ಯಪ್ಪ ದರ್ಶನಕ್ಕೆ ತೆರಳುವ ಮಹಿಳೆಯರಿಗೆ ಯಾವುದೇ ರಕ್ಷಣೆ ಇಲ್ಲ ಎಂಬ ಸ್ಪಷ್ಟನೆ ಹೊರಬಿದ್ದಿತ್ತು.