ಮುಂಬೈ, ನ 16 (Daijiworld News/MSP): ಶಾಲೆಗೆ ಬೈಕ್ ತೆಗೆದುಕೊಂಡು ಹೋಗಲು ಬಿಡಲಿಲ್ಲ ಎಂಬ ಕಾರಣಕ್ಕೆ ಹನ್ನೊಂದನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲಾ ಆವರಣದಲ್ಲೇ ಬೆಳಗ್ಗೆ 7.30 ರ ವೇಳೆಗೆ ಬೆಂಕಿ ಹಚ್ಚಿಕೊಂಡಿರುವ ಘಟನೆ ಮುಂಬೈಯ ಕಲಂಬೋಲಿ ಸೆಕ್ಟರ್ 1ರಲ್ಲಿ ನಡೆದಿದೆ.
ಅಮರದೀಪ್ ಸೊಸೈಟಿಯ ನಿವಾಸಿಯಾಗಿದ್ದ ಶಿವಂ ಯಾದವ್ (17) ಬೆಳಗ್ಗೆ ಶಾಲೆಗೆ ಬೈಕ್ ಒಯ್ಯುವುದಾಗಿ ತಂದೆಯ ಬಳಿ ಹೇಳಿದ್ದಾನೆ. ಆದರೆ ಶಿವಂ ಅಪ್ರಾಪ್ತನಾದ ಕಾರಣ ಆತನ ತಂದೆ ಅನುಮತಿ ನಿರಾಕರಿಸಿದ್ದಾರೆ. ಇದರಿಂದ ಅಸಮಾಧಾನಗೊಂಡಿದ್ದ ಶಿವಂ ಶಾಲೆ ತೆರಳಿ ಎರಡನೇ ಮಹಡಿಯಲ್ಲಿದ್ದ ವಾಶ್ ರೂಂ ಹೋಗಿದ್ದಾನೆ. ಆ ಬಳಿಕ ಬೆಂಕಿಹಚ್ಚಿಕೊಂಡಿದ್ದ ಆತ ವಾಶ್ ರೂಂನಿಂದ ಹೊರಗೆ ಓಡಿ ಬರುತ್ತಿದ್ದ ಆತನನ್ನು ಗಮನಿಸಿದ ಸಿಬ್ಬಂದಿಗಳು ತಕ್ಷಣ ಆಸ್ಪತೆಗೆ ಸಾಗಿಸಿದ್ದಾರೆ.
ಶಿವಂಗೆ ಶೇ.90 ರಷ್ಟು ಸುಟ್ಟಗಾಯಗಳಾಗಿವೆ. ಆಸ್ಪತ್ರೆಯಲ್ಲಿ ವೈದ್ಯರು ಆತನ ಕೃತ್ಯಕ್ಕೆ ಕಾರಣ ಕೇಳಿದಾಗ " ತನ್ನ ತಂದೆ ಬೈಕು ಶಾಲೆಗೆ ತೆಗೆದುಕೊಂಡು ಹೋಗಲು ಅನುಮತಿಸದ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದೇನೆ" ಎಂದು ತಿಳಿಸಿದ್ದಾನೆ.
ಶಿವಂ ಯಾದವ್ ತಂದೆ ದೀಪಕ್ ಯಾದವ್ ಪೊಲೀಸ್ ಪೇದೆಯಾಗಿದ್ದು, ನಾಗಪಾಡ ಪೊಲೀಸರ ಮೋಟಾರ್ ವಿಭಾಗದಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪರವಾನಗಿ ಇಲ್ಲದೆ ಬೈಕ್ ಚಾಲಯಿಸಿದರೆ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿ ಬೀಳಬಹುದು ಅಂಥ ಬೈಕ್ ಕೊಡಲು ನಿರಾಕರಿಸಿದ್ದರಂತೆ. ಶಿವಂಗೆ ಹಿರಿಯ ಸಹೋದರನೊಬ್ಬನಿದ್ದಾನೆ. ಶಿವಂ ಹಲವು ಬಾರಿ ಮನೆಯಲ್ಲಿ ಯಾರಿಗೂ ಹೇಳದೇ ಬೈಕ್ ತೆಗೆದುಕೊಂಡು ಹೋಗುತ್ತಿದ್ದ ಎಂದು ತಿಳಿದುಬಂದಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಶಾಲೆಯ ಸಿಸಿ ಟಿವಿ ತುಣುಕುಗಳನ್ನು ಪಡೆದುಕೊಂಡಿದ್ದಾರೆ." ಶಾಲಾ ವಾಶ್ ರೂಂನಲ್ಲಿ ಕೃತ್ಯಕ್ಕೆ ಬಳಸಿದ್ದ ಬಾಟಲಿಯೊಂದು ದೊರಕಿದ್ದು, ಅದನ್ನು ಆತನ ಮನೆಯಿಂದ ತಂದಿರಬಹುದು ಎಂದು ಎಂದು ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ಘಡ್ಜ್ ಅನುಮಾನ ವ್ಯಕ್ತಪಡಿಸಿದ್ದಾರೆ.