ಬೀದರ್, ನ.16(Daijiworld News/SS): ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹೊಟ್ಟೆಗೆ ಏನು ತಿಂತೀರಿ ಎಂದು ಅಧಿಕಾರಿಯೊಬ್ಬರಿಗೆ ಪ್ರಶ್ನಿಸಿದ ಅವರು, ನಿರ್ಮಿತಿ ಕೇಂದ್ರದ ಕಾಮಗಾರಿ ಸ್ಥಗಿತವಾಗಿರುವುದು ನಿನಗೆ ಗೋತ್ತಿದೆಯೋ ಇಲ್ವಾ..? ನೀವು ಹಾಗೂ ನಿರ್ಮಿತಿ ಕೇಂದ್ರದವರು ಸೇರಿ ಇಲಾಖೆ ಮುಳುಗಿಸಬೇಕು ಎಂದು ಚಿಂತನೆ ಮಾಡಿದ್ದೀರಾ ಎಂದು ಕೇಳಿದ್ದಾರೆ.
ನಿರ್ಮಿತಿ ಕೇಂದ್ರದ ಕಾಮಗಾರಿ ಸ್ಥಗಿತವಾಗಿದ್ದರೂ ಒಂದು ಕೋಟಿ ರೂ. ಬಿಡುಗಡೆ ಮಾಡುವಂತೆ ನಿರ್ಮಿತಿ ಕೇಂದ್ರ ಅಧಿಕಾರಿಗಳಿಗೆ ಪತ್ರ ಬರೆಯುತ್ತೀರಿ. ದುಡ್ಡು ತೆಗೆದುಕೊಂಡು ಏನು ಮಾಡುತ್ತೀರಿ..? ನಿಮಗೇನು ತಿಳಿಯುವುದಿಲ್ಲವೇ..? ಹಿಂದೆ ಬಿಡುಗಡೆ ಮಾಡಿದ ಆ ಒಂದು ಕೋಟಿ ರೂ. ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ.
ಮಾತ್ರವಲ್ಲ, ಹಣ ವಾಪಸ್ ತರಸಿ ಹಾಗೂ ಅಧಿಕಾರಿ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಮೇಲಧಿಕಾರಿಗೆ ಸಚಿವರು ಸೂಚನೆ ನೀಡಿದ್ದಾರೆ. ಬಿಡುಗಡೆಯಾದ ಒಂದು ಕೋಟಿ ರೂ. ಹಣ ಎಲ್ಲಿ ಹೋಗಿದೆ..? ಪರಿಶೀಲನೆ ನಡೆಸಿ ಈ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.