ಮುಂಬೈ, ನ.16(Daijiworld News/SS): ದೆಹಲಿಯಲ್ಲಿ ನಿಗದಿಯಾಗಿರುವ ಎನ್'ಡಿಎ ಸಭೆಯಲ್ಲಿ ಶಿವಸೇನೆ ಭಾಗವಹಿಸುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿದೆ.
ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಶಿವಸೇನೆ ಸಂಸದ ಸಂಜಯ್ ರಾವತ್, ಯಾವುದೇ ಕಾರಣಕ್ಕೂ ನಾವು ಸಭೆಗೆ ಹಾಜರಾಗುವುದಿಲ್ಲ. ಎನ್'ಡಿಎ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆ ನೀಡುವ ಮೂಲಕ ಶಿವಸೇನೆ, ಬಿಜೆಪಿ ನೇತೃತ್ವದ ಎನ್ಡಿಎಯಿಂದ ಶಿವಸೇನೆ ವಾಸ್ತವಿಕವಾಗಿ ಬೇರ್ಪಟ್ಟಿದೆ ಎಂಬ ಸುಳಿವನ್ನು ನೀಡಿದ್ದಾರೆ.
ಈ ಬಗ್ಗೆ ರಾಜ್ಯ ಬಿಜೆಪಿ ವಕ್ತಾರ ಮಾಧವ್ ಭಂಡಾರಿ ಅವರನ್ನು ಪ್ರಶ್ನಿಸಿದಾಗ, ಯಾವುದೇ ನಿರ್ದಿಷ್ಟ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಎನ್ಡಿಎ ಸಮಾವೇಶಕ್ಕೆ ಏಕೆ ಹಾಜರಾಗುವುದಿಲ್ಲ ಎಂಬ ಬಗ್ಗೆ ನೀವು ಶಿವಸೇನೆಗೆ ಪ್ರಶ್ನೆ ಕೇಳಬೇಕು ಎಂದು ಅವರು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಎನ್.ಡಿ.ಎ. ಸರ್ಕಾರದಲ್ಲಿ ಶಿವಸೇನೆ ಏಕೈಕ ಸಚಿವರಾಗಿದ್ದ ಅರವಿಂದ್ ಸಾವಂತ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿರುವುದು ಬಿಜೆಪಿ ಮತ್ತು ಶಿವಸೇನೆಯ ಬಾಂಧವ್ಯ ಕಡಿತಕ್ಕೆ ಮುನ್ನುಡಿ ಬರೆದಿದೆ.