ಬೆಂಗಳೂರು,ನ 17 (Daijiworld News/MB): ಅನರ್ಹ ಶಾಸಕರ ರಾಜಿನಾಮೆಯಿಂದ ತೆರೆವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ತನ್ನ ಅಭ್ಯರ್ಥಿಗಳ ಎರಡನೆ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ 6 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಿಸಿದೆ. ಆದರೆ ಯಶವಂತಪುರ ಕ್ಷೇತ್ರದ ಅಭ್ಯರ್ಥಿಯ ನಿರ್ಧಾರ ಇನ್ನೂ ಆಗಿಲ್ಲ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ನಾಯಕರು ಸೇರಿ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿ ಹೈಕಮಾಂಡ್ ನ ಒಪ್ಪಿಗೆಗಾಗಿ ಕಳುಹಿಸಿದ್ದರು.
ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಚುನಾವಣೆ) ಮುಕುಲ್ ವಾಸ್ನಿಕ್ ಅವರು ಈ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಅಥಣಿಗೆ ಗಜಾನನ ಬಾಲಚಂದ್ರ ಮಂಗಸೂಳಿ, ಕಾಗವಾಡಕ್ಕೆ ರಾಜು ಕಾಗೆ, ಗೋಕಾಕ್ಗೆ ಲಖನ್ ಜಾರಕಿಹೊಳಿ, ವಿಜಯನಗರ (ಹೊಸಪೇಟೆ)ಕ್ಕೆ ವೆಂಕಟರಾವ್ ಘೋರ್ಪಡೆ, ಶಿವಾಜಿನಗರಕ್ಕೆ ರಿಜ್ವಾನ್ ಅರ್ಷದ್ ಮತ್ತು ಕೆ.ಆರ್. ಪೇಟೆಗೆ ಕೆ.ಬಿ. ಚಂದ್ರ ಶೇಖರ್ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿ ಮುಕುಲ್ ವಾಸ್ನಿಕ್ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಕಾಂಗ್ರೆಸ್ ಉಪ ಚುನಾವಣೆಗೆ ಉಸ್ತುವಾರಿಗಳನ್ನು ನಿಯೋಜನೆ ಮಾಡಿದ್ದು, ಯಶವಂತಪುರಕ್ಕೆ ಎಂ.ಕೃಷ್ಣಪ್ಪ, ಶಿವಾಜಿನಗರಕ್ಕೆ ಮಾಜಿ ಸಚಿವ ಯು.ಟಿ. ಖಾದರ್, ಹುಣಸೂರಿಗೆ ಡಾ.ಎಚ್.ಸಿ.ಮಹದೇವಪ್ಪ,ಮಹಾಲಕ್ಷ್ಮಿ ಲೇ ಔಟ್ಗೆ ಎಚ್.ಎಂ. ರೇವಣ್ಣ, ಕೆ.ಆರ್. ಪೇಟೆಗೆ ಕೆ.ಜೆ.ಜಾರ್ಜ್,ಗೋಕಾಕ್ಗೆ ಸತೀಶ ಜಾರಕಿಹೊಳಿ, ಕೆ.ಆರ್.ಪುರಗೆ ಚೆಲುವರಾಯಸ್ವಾಮಿ, ಹೊಸಕೋಟೆಗೆ ಕೃಷ್ಣ ಬೈರೇಗೌಡ, ಕಾಗವಾಡಕ್ಕೆ ಈಶ್ವರ್ ಖಂಡ್ರೆ, ಯಲ್ಲಾಪುರಕ್ಕೆ ಆರ್.ವಿ.ದೇಶಪಾಂಡೆ, ಚಿಕ್ಕಬಳ್ಳಾಪುರಕ್ಕೆ ಶಿವಶಂಕರರೆಡ್ಡಿ, ಹಿರೆಕೇರೂರಿಗೆ ಎಚ್.ಕೆ.ಪಾಟೀಲ್, ರಾಣೆ ಬೆನ್ನೂರಿಗೆ ಎಸ್.ಆರ್. ಪಾಟೀಲ್, ವಿಜಯನಗರಕ್ಕೆ ಬಸವರಾಜ ರಾಯರೆಡ್ಡಿ, ಅಥಣಿಗೆ ಎಂ.ಬಿ.ಪಾಟೀಲ್ ಗೆ ಹೊಣೆ ನೀಡಿದೆ. ಈ ನಾಯಕರ ನೇತೃತ್ವದಲ್ಲಿ ಪ್ರತಿ ಕ್ಷೇತ್ರಕ್ಕೆ ವಿಧಾನಪರಿಷತ್ ಸದಸ್ಯರು, 19ರಿಂದ 20 ಜನ ಶಾಸಕರು, ಮಾಜಿ ಶಾಸಕ ಮತ್ತು ಸಂಸದರು ಹಾಗೂ ಮಾಜಿ ಸಚಿವರು ಇರುವ ತಂಡವನ್ನು ತಯಾರಿ ಮಾಡಲಾಗಿದೆ.