ಚಿಕ್ಕಬಳ್ಳಾಪುರ, ನ 17 (Daijiworld News/MB): ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಗೆ ಜೆಡಿಎಸ್ ದಿಢೀರ್ ಆಗಿ ಅಭ್ಯರ್ಥಿ ಬದಲಾವಣೆ ಮಾಡಿದೆ.
ಈ ಮೊದಲು ಹೈಕಮಾಂಡ್ ಆದೇಶದಂತೆ ಪಟ್ಟಿ ಬಿಡುಗಡೆ ಮಾಡಿದ್ದ ಜೆಡಿಎಸ್ ಮಾಜಿ ಶಾಸಕ ಕೆ.ಪಿ ಬಚ್ಚೇಗೌಡ ಅವರನ್ನು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿತ್ತು. ಆದರೆ ರಾತ್ರೋರಾತ್ರಿ ತನ್ನ ನಿರ್ಧಾರ ಬದಲಾಯಿಸಿದ ಜೆಡಿಎಸ್ ಹೈಕಮಾಂಡ್ ಕೆ.ಪಿ ಬಚ್ಚೇಗೌಡ ಬದಲಾಗಿ ಶಿಡ್ಲಘಟ್ಟ ತಾಲೂಕು ನಾಗಮಂಗಲ ನಿವಾಸಿ ರಾಧಾಕೃಷ್ಣ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.
ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ನವೆಂಬರ್ 18 ರ ಸೋಮವಾರ ಚಿಕ್ಕಬಳ್ಳಾಪುರಕ್ಕೆ ಆಗಮಿಸಲಿದ್ದು ಈ ಸಂದರ್ಭದಲ್ಲಿ ರಾಧಾಕೃಷ್ಣ ಕುಮಾರಸ್ವಾಮಿ ಜೊತೆಗೂಡಿ ನಾಮಪತ್ರ ಸಲ್ಲಿಸಲಿದ್ದಾರೆ.
ಈ ಕುರಿತು ಸಿಡಿಮಿಡಿಗೊಂಡ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಧಾಕರ್ 'ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷದವರಿಗೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವ ವ್ಯಕ್ತಿತ್ವವಿರುವ ಅಭ್ಯರ್ಥಿ ಇಲ್ಲ ಎಂದು ಅನಿಸಿರಬಹುದು. ಹಣ ಇದೆ ಎಂಬ ಕಾರಣಕ್ಕೆ ಬೇರೆ ಕ್ಷೇತ್ರದವರನ್ನು ಈ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಇದು ಈ ಕ್ಷೇತ್ರದ ಜನರಿಗೆ ಮಾಡುವ ಅವಮಾನ' ಎಂದು ಹೇಳಿದ್ದಾರೆ.