ನವದೆಹಲಿ, ನ 17 (Daijiworld News/MB): ಸರಕಾರ ಸ್ವಾಮ್ಯದ ಏರ್ ಇಂಡಿಯಾ ಮತ್ತು ಭಾರತ್ ಪೆಟ್ರೋಲಿಯಂ ಸಂಸ್ಥೆಯನ್ನು 2020ರ ಮಾರ್ಚ್ ಒಳಗೆ ಮಾರಾಟ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
ಅಂತಾರಾಷ್ಟ್ರೀಯ ರೋಡ್ ಶೋಗಳಲ್ಲಿ ವಿಮಾನಯಾನ ಸಂಸ್ಧೆ ಏರ್ ಇಂಡಿಯಾ ಮಾರಾಟದ ವಿಷಯದಲ್ಲಿ ಹೂಡಿಕೆದಾರರಿಂದ ಹೆಚ್ಚಿನ ಆಸಕ್ತಿ ಕಂಡುಬಂದಿದೆ. ಮಾರಾಟ ಮಾಡುವ ಪ್ರಕ್ರಿಯೆ ಒಂದು ವರ್ಷದ ಹಿಂದೆಯೇ ನಡೆಸಲಾಗಿತ್ತು. ಆದರೆ ಹೂಡಿಕೆದಾರರು ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ಈ ಎರಡು ಸಂಸ್ಥೆಗಳ ಮಾರಾಟ ಪ್ರಸ್ತುತ ಹಣಕಾಸು ವರ್ಷದಲ್ಲಿ ಒಂದು ಒಂದು ಲಕ್ಷ ಕೋಟಿ ರುಪಾಯಿಗಳನ್ನು ಕ್ರೋಢಿಕರಿಸುವ ನಿಟ್ಟಿನಲ್ಲಿ ಮಾರಾಟ ಮಾಡಲಿದ್ದು, ಪ್ರಕ್ರಿಯೆ ಮುಂದುವರೆದಿದೆ. ಇದೇ ವರ್ಷ ಪೂರ್ವವಾಗುವ ಸಾಧ್ಯತೆ ಇದೆ ಎಂದು ನಿರ್ಮಲಾ ತಿಳಿಸಿದ್ದಾರೆ.
ಈ ಬಂಡವಾಳ ಹಿಂತೆಗೆಯುವುದರಿಂದ ಸರಕಾರದ ಆದಾಯ ಹೆಚ್ಚುವುದಾಗಿ ನಿರೀಕ್ಷಿಸಲಾಗಿದೆ. ಆರ್ಥಿಕ ಹಿಂಜರಿತವನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ಸಕಾಲದಲ್ಲಿ ಕ್ರಮ ಕೈಗೊಂಡಿದೆ. ಹೀಗಾಗಿ ಹಲವು ವಲಯಗಳು ಒತ್ತಡದಿಂದ ಹೊರ ಬರುತ್ತಿವೆ ಎಂದರು.