ಲಖನೌ, ನ 17 (DaijiworldNews/SM): ಅಯೋಧ್ಯೆ ವಿವಾದಕ್ಕೆ ಶತಮಾನದ ಬಳಿಕ ಇದೀಗ ತೆರೆಬಿದ್ದಿದ್ದು ಜಮೀನು ರಾಮಲಲ್ಲಾ ಪಾಲಾಗಿದೆ. ತೀರ್ಪು ಪ್ರಕಟಗೊಂಡು ವಾರ ಕಳೆದ ಬಳಿಕ ಸುಪ್ರೀಂ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸಮಿತಿಯೊಂದು ಸಿದ್ಧಗೊಂಡಿದೆ. ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಲು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಧರಿಸಿದೆ.
ಆ ಮೂಲಕ ರಾಮಮಂದಿರ ನಿರ್ಮಾಣವಾಗುವುದಕ್ಕೆ ಆರಂಭಿಕ ವಿಘ್ನ ಎದುರಾಗಿದೆ. ಉತ್ತರ ಪ್ರದೇಶದ ಲಖನೌನಲ್ಲಿ ನ.17 ರಂದು ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಸಮಿತಿ ಮುಖಂಡರು ಕೈಗೊಂಡಿದ್ದಾರೆ.
ಸಭೆ ನಡೆಸಿ ನಿರ್ಧಾರ ಕೈಗೊಂಡ ಬಳಿಕ ಅಖಿಲ ಭಾರತೀಯ ಮುಸ್ಲೀಂ ವೈಯಕ್ತಿಕ ಕಾನೂನು ಮಂಡಳಿಯ ಪದಾಧಿಕಾರಿಗಳು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, 5 ಎಕರೆ ಜಮೀನು ನೀಡುವ ಸುಪ್ರೀಂ ಕೋರ್ಟ್ ನ ನಿರ್ಧಾರವನ್ನು ನಾವು ಸ್ವೀಕರಿಸುವುದಿಲ್ಲ. ಇಸ್ಲಾಮಿಕ್ ಕಾನೂನು ಶರಿಯತ್ ನ ಪ್ರಕಾರ ನಾವು ಮಸೀದಿ ನಿರ್ಮಿಸುವುದಕ್ಕೆ ಬೇರೆ ಯಾವುದೇ ಸ್ಥಳವನ್ನೂ ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ತಮ್ಮ ಮೇಲ್ಮನವಿ ತಿರಸ್ಕಾರಗೊಳ್ಳುತ್ತದೆ ಎಂದು ಹೇಳಿರುವ ಅವರು, ಆದರೂ ನಮ್ಮ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದಿದ್ದಾರೆ.