ಮೈಸೂರು, ನ.18(Daijiworld News/SS): ನಾನು ಸಾಮಾಜಿಕ ನ್ಯಾಯದ ಪರವಾಗಿ ಇದ್ದೇನೆ. ಅದಕ್ಕೆ ನನ್ನ ಮೇಲೆ ಎಲ್ಲರೂ ಮುಗಿ ಬೀಳುತ್ತಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿಯವರು ನನ್ನ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ 15 ಕ್ಷೇತ್ರದ ಅಭ್ಯರ್ಥಿಗಳು ಫೈನಲ್ ಆಗಿದ್ದಾರೆ. ಈಗಾಗಲೇ ಕೆಲವರು ನಾಮಪತ್ರ ಸಲ್ಲಿಸಿದ್ದು, ಉಳಿದವರು ಸಲ್ಲಿಸಲಿದ್ದಾರೆ. ಉಪ ಚುನಾವಣೆಯಲ್ಲಿ 15 ಆಗದಿದ್ದರೂ 12 ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪ ಚುನಾವಣೆಯಲ್ಲಿ ಅನರ್ಹ ಶಾಸಕರನ್ನು ಸೋಲಿಸುವುದು ನಮ್ಮ ಉದ್ದೇಶ. ಅವರನ್ನ ಅನರ್ಹಗೊಳಿಸಲು ಹೋರಾಟ ಮಾಡಿದ್ದೆ. ಹೀಗಾಗಿ ಎಲ್ಲರಿಗೆ ನಾನೇ ಟಾರ್ಗೆಟ್ ಆಗಿದ್ದೇನೆ ಎಂದು ಹೇಳಿದರು.
ಇದೇ ವೇಳೆ ಮಹಾರಾಷ್ಟ್ರ ಸರ್ಕಾರ ರಚನೆ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ರಚನೆಗಾಗಿ ಎನ್ಸಿಪಿ ಹಾಗೂ ಕಾಂಗ್ರೆಸ್ ಶಿವಸೇನೆ ಜೊತೆ ಕೈ ಜೋಡಿಸಲು ಮುಂದಾಗಿವೆ. ಶಿವಸೇನೆಯು ಅಧಿಕೃತವಾಗಿ ಎನ್ಡಿಎದಿಂದ ಹೊರ ಬಂದಿದೆ. ಹಾಗಾಗಿ ಶಿವಸೇನೆ ಈಗ ಕೋಮುವಾದಿಯಲ್ಲ. ಕೋಮುವಾದದಿಂದ ದೂರ ಉಳಿಯುವುದಾಗಿ ಶಿವಸೇನೆ ಹೇಳಿದೆ ಎಂದು ಹೇಳಿದರು.