ಬೆಂಗಳೂರು, ನ.18(Daijiworld News/SS): ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸಿ, ಸೆ.7ರಂದು ಹೊಸ ಇತಿಹಾಸ ಬರೆಯಲು ಇಸ್ರೋ ಮುಂದಾಗಿತ್ತು. ಆದರೆ ಚಂದ್ರನ ಮೇಲ್ಮೈನಿಂದ ಕೇವಲ 500 ಮೀಟರ್ ದೂರದಲ್ಲಿದ್ದಾಗ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿದುಕೊಂಡಿತ್ತು. ಇದೀಗ ನೌಕೆಯ ವೈಫಲ್ಯಕ್ಕೆ ಸಾಫ್ಟ್ವೇರ್ ದೋಷವನ್ನು ಇಸ್ರೋ ಪತ್ತೆ ಹೆಚ್ಚಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಐತಿಹಾಸಿಕ ಚಂದ್ರಯಾನ-2 ನೌಕೆ ಕಡೆಯ ಕ್ಷಣದಲ್ಲಿ ವೈಫಲ್ಯ ಅನುಭವಿಸಲು ಸಾಫ್ಟ್ವೇರ್ನಲ್ಲಿ ಎದುರಾದ ಅನಿರೀಕ್ಷಿತ ದೋಷ ಕಾರಣ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಗಸೂಚಿಯಾಗಿ ಕೆಲಸ ಮಾಡುತ್ತಿದ್ದ ಸಾಫ್ಟ್ವೇರ್ ದಿಢೀರ್ ನಿಷ್ಕ್ರಿಯವಾದ ಹಿನ್ನೆಲೆಯಲ್ಲಿ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿದುಕೊಂಡು, ಚಂದ್ರನ ಮೇಲೆ ಅಪ್ಪಳಿಸಿದೆ ಎಂದು ಬಾಹ್ಯಾಕಾಶ ಆಯೋಗಕ್ಕೆ ಇಸ್ರೋ ಸಲ್ಲಿಸಿರುವ ಆಂತರಿಕ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಮೂಲಗಳು ತಿಳಿಸಿದೆ.
ಪ್ರಾಯೋಗಿಕ ಅವಧಿಯಲ್ಲಿ ಈ ಸಾಫ್ಟ್ವೇರ್ ದೋಷದ ಹಿತವಾಗಿ ಕೆಲಸ ಮಾಡಿತ್ತು. ಆದರೆ ಕಡೆ ಕ್ಷಣದಲ್ಲಿ ಕೈಕೊಟ್ಟಿತು ಎಂದು ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್ ನಿರ್ದೇಶಕ ವಿ ನಾರಾಯಣನ್ ನೇತೃತ್ವದ ಇಸ್ರೋದ ಆಂತರಿಕ ಸಮಿತಿ ತಿಳಿಸಿದೆ.