ಬೆಂಗಳೂರು, ನ.18(Daijiworld News/SS): ಡಿಸೆಂಬರ್ 5ರಂದು ರಾಜ್ಯದ 15 ಅನರ್ಹ ಶಾಸಕರಿಂದ ತೆರವಾದಂತ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಉಪಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ, ಇಂದಿನಿಂದ ಬೆಂಗಳೂರು ವ್ಯಾಪ್ತಿಯ ನಾಲ್ಕು ಕ್ಷೇತ್ರಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಬೆಂಗಳೂರು ನಗರದ ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಹೀಗಾಗಿ ನಾಮಪತ್ರ ಸಲ್ಲಿಕೆಯಾಗಲಿರುವ ಚುನಾವಣಾ ಕಚೇರಿ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ಅಷ್ಟೇ ಅಲ್ಲದೇ ಉಪಚುನಾವಣೆಯಲ್ಲಿ ಮೆರವಣಿಗೆ, ಸಂಭ್ರಮಾಚರಣೆ, ಪ್ರತಿಭಟನೆ, ಗುಂಪು ಸೇರುವುದು ಮತ್ತು ಆಯುಧಗಳನ್ನ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
ಡಿಸೆಂಬರ್ ಐದರಂದು ನಡೆಯಲಿರುವ ಹದಿನೈದು ಕ್ಷೇತ್ರಗಳ ಉಪಚುನಾವಣೆಗೆ ಇಂದು (ನ 18) ನಾಮಪತ್ರ ಸಲ್ಲಿಸಲು ಅಂತಿಮದಿನ. ಡಿಸೆಂಬರ್ ಒಂಬತ್ತರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.