ನವದೆಹಲಿ, ನ 18 (Dijiworld News/MB): ಅಯೋಧ್ಯೆ ತೀರ್ಪಿನ ವಿಚಾರದಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎ.ಐ.ಎಂ.ಪಿ.ಎಲ್.ಬಿ) ಮತ್ತು ಜಮೀಯತ್ ಉಲೇಮಾ ಎ ಹಿಂದ್ ಸಂಘಟನೆ ಮರು ಪರಿಶೀಲನೆ ಅರ್ಜಿ ಸಲ್ಲಿಸುವುದು ಎಂದು ನವೆಂಬರ್ 17 ರ ಭಾನುವಾರ ನಿರ್ಧರಿಸಿದೆ.
'ಮಸೀದಿಗಾಗಿ 5 ಎಕರೆ ಪರ್ಯಾಯ ಜಮೀನು ಪಡೆದುಕೊಳ್ಳುವುದರಲ್ಲಿ ನಮ್ಮ ವಿರೋಧವಿದೆ. ಮಸೀದಿಗೆ ಪರ್ಯಾಯ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ' ಎಂದು ಮಂಡಳಿಯ ಕಾರ್ಯದರ್ಶಿ ಝಫರ್ ಯಾಬ್ ಜಿಲಾನಿ ಹೇಳಿದ್ದಾರೆ.
1949ರ ಡಿಸೆಂಬರ್ 23 ರ ರಾತ್ರಿ ಒಮ್ಮಲ್ಲೇ ಶ್ರೀ ರಾಮನ ಮೂರ್ತಿಯನ್ನು ಬಾಬರಿ ಮಸೀದಿಯೊಳಗೆ ಇರಿಸಲಾಗಿದ್ದು ಅದು ಸಂವಿಧಾನ ಬಾಹಿರ. ಹೀಗಿರುವಾಗ ಆ ಮೂರ್ತಿ ಆರಾಧನೆಗೆ ಅರ್ಹ ಎಂದು ಸುಪ್ರೀಂ ಕೋರ್ಟ್ ಹೇಗೆ ಹೇಳುತ್ತದೆ. ಹಿಂದೂ ಧರ್ಮವೂ ಕೂಡಾ ಮೂರ್ತಿ ಆರಾಧನೆಗೆ ಅರ್ಹ ಎಂದು ಹೇಳುವುದಿಲ್ಲ ಎಂದು ತಿಳಿಸಿದ್ದಾರೆ.
ಜಮೀಯತ್ ಉಲೇಮಾ ಎ ಹಿಂದ್ ಸಂಘಟನೆಯ ಅಧ್ಯಕ್ಷ ಅರ್ಷದ್ ಮದನಿ 'ನಾವು ವಕೀಲರು ಮತ್ತು ಪರಿಣತರ ಜೊತೆ ಚರ್ಚೆ ನಡೆಸಿ ಈ ನಿರ್ಧಾರವನ್ನು ಕೈಗೊಂಡಿದ್ದು, ತೀರ್ಪು ಮುಸ್ಲಿಂ ಕಕ್ಷಿದಾರರ ವಿರುದ್ಧ ಬಂದಿದೆ. ಸಂವಿಧಾನವು ಮರುಪರಿಶೀಲನೆಗೆ ಅವಕಾಶವನ್ನು ನೀಡಿದೆ' ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅಖಿಲ ಭಾರತ ಹಿಂದೂ ಮಹಸಭಾದ ವಕೀಲರಾದ ವರುಣ್ ಸಿನ್ನಾ 'ಅಯೋಧ್ಯೆ ಪ್ರಕರಣದಲ್ಲಿ ಎ.ಐ.ಎಂ.ಪಿ.ಎಲ್.ಬಿ ಕಕ್ಷಿದಾರರಲ್ಲ. ಹಾಗಿರುವಾಗ ಅವರಿಗೆ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸುವ ಯಾವುದೇ ಅಧಿಕಾರ ಇಲ್ಲ. ಆದರೆ ಸುನ್ನಿ ವಕ್ಫ್ ಬೋರ್ಡ್ ಗೆ ಮರುಪರಿಶೀಲನಾ ಮೇಲ್ಮನವಿ ಸಲ್ಲಿಸುವ ಅಧಿಕಾರವಿದೆ. ಪ್ರಕರಣದಲ್ಲಿ ಅರ್ಜಿದಾರರು ಮಾತ್ರ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಸಾಧ್ಯ ' ಎಂದು ಹೇಳಿದ್ದಾರೆ.
ಅಯೋಧ್ಯೆ ಪ್ರಕರಣದ ಮುಖ್ಯ ಕಕ್ಷಿದಾರ ಇಕ್ಬಾಲ್ ಅನ್ಸಾರಿ ಅರ್ಜಿ ಸಲ್ಲಿಸಿ ಯಾವುದೇ ಪ್ರಯೋಜನ ಇಲ್ಲ. ಅರ್ಜಿ ಸಲ್ಲಿಸಿದರೆ ದೇಶದ ಸಾಮರಸ್ಯಕ್ಕೆ ದಕ್ಕೆ ಉಂಟಾಗುತ್ತದೆ. ಅರ್ಜಿ ಸಲ್ಲಿಕೆಗೆ ನನ್ನ ಸಮ್ಮತಿ ಇಲ್ಲ ಎಂದು ಈ ಮೊದಲೇ ತಿಳಿಸಿದ್ದಾರೆ.