ನವದೆಹಲಿ, ನ.18(Daijiworld News/SS): ಮಹಾರಾಷ್ಟ್ರ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿದ್ದು, ಸ್ಥಿರ ಸರ್ಕಾರ ರಚನೆಗೊಳ್ಳಲಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಬಹುಮತ ಪಡೆದುಕೊಂಡಿದೆ. ಆದರೆ, ಅಧಿಕಾರ ಹಂಚಿಕೆಯಲ್ಲಿ ಮೂಡಿಬಂದ ವೈಮನಸ್ಸಿನಿಂದ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಎನ್'ಡಿಎ ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಕೆಲವರು ತಮ್ಮಷ್ಟಕ್ಕೆ ತಾವೇ ತಮ್ಮನ್ನು ದೇವರೆಂದುಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವವನ್ನು ಕಾಪಾಡಬೇಕು. ಒಬ್ಬನು ತನ್ನನ್ನು ತಾನೇ ದೇವರೆಂದು ಪರಿಗಣಿಸಬಾರದು. ಅಹಂ ಹಾಗೂ ಗರ್ವದಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.
ಎನ್'ಡಿಎಯನ್ನು ಸಾಕಷ್ಟು ಸಂದರ್ಭದಲ್ಲಿ ನಾವು ರಕ್ಷಿಸಿದ್ದೇವೆ. ಎಂದಿಗೂ ಎನ್'ಡಿಎ ಕೈಬಿಟ್ಟಿಲ್ಲ. ಆದರೆ, ಇಂದು ಅವರು ತಮ್ಮನ್ನು ತಾವು ದೇವರೆಂದುಕೊಳ್ಳುತ್ತಿದ್ದಾರೆ. ಎನ್'ಡಿಎಯಿಂದ ನೀವು ಶಿವಸೇನೆಯನ್ನು ತೆಗೆದುಹಾಕಿದ ಮಾತ್ರಕ್ಕೆ ನೀವೇನು ದೇವರಾಗುವುದಿಲ್ಲ. ಬಿಜೆಪಿಯ ಈ ವರ್ತನೆ ಕೆಲಸಕ್ಕೆ ಬರುವುದಿಲ್ಲ ಎಂದು ಟೀಕಿಸಿದ್ದಾರೆ.
ಸಂಸತ್ತಿನಲ್ಲಿ ಎಲ್ಲಿ ಕುಳಿತುಕೊಳ್ಳುತ್ತೇವೆ ಎಂಬುದು ಮುಖ್ಯವಲ್ಲ. ದೇಶದ ಅಭಿವೃದ್ಧಿಗೆ ಶಿವಸೇನೆ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ.