ನವದೆಹಲಿ, ನ 18 (Dijiworld News/MB): ಸಂಸತ್ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು ಲೋಕಸಭಾ ಕಲಾಪದಲ್ಲಿ ಜಮ್ಮು-ಕಾಶ್ಮೀರದಲ್ಲಿ ಫಾರೂಖ್ ಅಬ್ದುಲ್ಲಾ ಅವರನ್ನು ಗೃಹಬಂಧನದಲ್ಲಿ ಇರಿಸಿರುವುದನ್ನು ಖಂಡಿಸಿ, ಫಾರೂಖ್ ಅಬ್ದುಲ್ ಬಿಡುಗಡೆಗೆ ಒತ್ತಾಯಿಸಿ ವಿಪಕ್ಷಗಳ ಸಂಸದರು ಘೋಷಣೆ ಕೂಗಿದರು.
108 ದಿನಗಳಿಂದ ಫಾರೂಖ್ ಅಬ್ದುಲ್ಲಾ ಅವರನ್ನು ಬಂಧನದಲ್ಲಿ ಇರಿಸಲಾಗಿದೆ. ಲೋಕಸಭೆಗೆ ಅವರು ಹಾಜರಾಗಲೇಬೇಕು. ಲೋಕಸಭೆಗೆ ಹಾಜರಾಗುವುದು ಅವರ ಸಾಂವಿಧಾನಿಕ ಹಕ್ಕು ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧುರಿ ಲೋಕಸಭೆಯಲ್ಲಿ ಆಗ್ರಹ ಮಾಡಿದ್ದಾರೆ.
ಕಲಾಪ ಆರಂಭದಲ್ಲಿ ನೂತನವಾಗಿ ಆಯ್ಕೆಯಾದ ಸಂಸದರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ದಿವಂಗತರಾದ ಮಾಜಿ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಹಾಗೂ ರಾಮ್ ಜೇಠ್ಮಲಾನಿ ಅವರಿಗೆ ಲೋಕಸಭಾ ಸ್ಪೀಕರ್ ಗೌರವ ಸಲ್ಲಿಸಿದರು.
ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರ ಹಾಗೂ ಫಾರೂಖ್ ಅಬ್ದುಲ್ಲಾ ವಿಚಾರದಲ್ಲಿ ಪ್ರತಿಭಟಿಸಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷ ಸಭಾತ್ಯಾಗ ಮಾಡಿದ್ದು, ರಾಜ್ಯಸಭೆಯಲ್ಲಿ ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟಿನ ವಿಚಾರದಲ್ಲಿ ಶಿವಸೇನಾ ಸಂಸದರು ಘೋಷಣೆ ಕೂಗಿ ಸಭಾತ್ಯಾಗ ಮಾಡಿರುವುದಾಗಿ ವರದಿಯೊಂದರಿಂದ ತಿಳಿದು ಬಂದಿದೆ. ಹಾಗಾಗಿ ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನ 2ಗಂಟೆಗೆ ಮುಂದೂಡಲಾಗಿದೆ.