ನವದೆಹಲಿ, ನ.18(Daijiworld News/SS): ಸಂಸತ್ತಿನ ಉಭಯ ಸದನಗಳ ಕಲಾಪ ಆರಂಭವಾಗಿದ್ದು ಎರಡೂ ಸದನಗಳಲ್ಲಿ ಅಗಲಿದ ಹಾಲಿ ಮತ್ತು ಮಾಜಿ ಸಂಸದರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮತ್ತು ರಾಮ್ ಜೇಠ್ಮಲಾನಿ ಅವರಿಗೆ ಗೌರವ ನಮನ ಸಲ್ಲಿಸಲಾಗಿದೆ.
ಇಂದಿನಿಂದ ಚಳಿಗಾಲ ಅಧಿವೇಶನ ಆರಂಭಗೊಂಡಿದ್ದು, ಡಿಸೆಂಬರ್ 13ರವರೆಗೂ ಅಧಿವೇಶನ ನಡೆಯಲಿದೆ. ಮೊದಲ ದಿನದ ಸಂಸತ್ತಿನ ಉಭಯ ಸದನಗಳ ಕಲಾಪ ಆರಂಭಕ್ಕೂ ಮುನ್ನ ಅಗಲಿದ ನಾಯಕರಿಗೆ ನಮನ ಸಲ್ಲಿಸಲಾಗಿದ್ದು, ರಾಜ್ಯಸಭಾ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.
ನಾಗರಿಕ(ತಿದ್ದುಪಡಿ) ಮಸೂದೆ 2019 ಸೇರಿದಂತೆ ಹಲವು ಮಸೂದೆಗಳು ಈ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ. ಖಾಸಗಿ ದತ್ತಾಂಶ ರಕ್ಷಣಾ ಮಸೂದೆ 2019, ಮ್ಯಾರಿಟೈಮ್ ಪೈರಸಿ ವಿರೋಧಿ ಮಸೂದೆ 2019 ಮತ್ತು ಲಿಂಗಾಯತ ವ್ಯಕ್ತಿಗಳು (ಹಕ್ಕುಗಳ ರಕ್ಷಣೆ) ಮಸೂದೆ 2019 ಕೂಡ ಮಂಡನೆಯಾಗುವ ನಿರೀಕ್ಷೆಯಿದೆ.
ಸಂಸತ್ತಿನ ಉಭಯ ಸದನಗಳ ಕಲಾಪ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಸಂಸತ್ತು ಚಳಿಗಾಲ ಅಧಿವೇಶನದಲ್ಲಿ ಪ್ರತೀ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ. ಸಂಸತ್ತಿನಲ್ಲಿ ಚರ್ಚೆಗಳನ್ನು ಸಮೃದ್ಧಗೊಳಿಸಲು ಪ್ರತಿಯೊಬ್ಬರೂ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.