ಮೈಸೂರು, ನ 18 (Dijiworld News/MB): ಶಾಸಕ ತನ್ವೀರ್ ಸೇಠ್ ಅವರನ್ನು ಹತ್ಯೆ ಮಾಡುವ ಉದ್ದೇಶದಿಂದಲ್ಲೇ ಆರೋಪಿ ಫರ್ಹಾನ್ ಖಾನ್ ಶಾಸಕರಿಗೆ ಚೂರಿಯಿಂದ ಇರಿದಿರುವುದಾಗಿ ತನಿಖೆಯ ವೇಳೆ ತಿಳಿದು ಬಂದಿದ್ದು, ಪೊಲೀಸರು 5 ಜನರನ್ನು ಬಂಧಿಸಿದ್ದಾರೆ.
ಕೆಲಸ ಹಾಗೂ ಇತರ ಸಹಾಯ ಯಾಚಿಸಿ ತನ್ವೀರ್ ಸೇಠ್ ಬಳಿ ಹೋದಾಗ ಅವರು ಸರಿಯಾಗಿ ಉಪಚರಿಸಿರಲಿಲ್ಲ. ಈ ರೀತಿ ವರ್ತಿಸುವ ಜನಪ್ರತಿನಿಧಿಗಳು ಇರುವುದು ಬೇಡ ಎಂದು ಈ ಮೊದಲು ಮೂರು ಬಾರಿ ಯತ್ನ ಮಾಡಿ ವಿಫಲನಾಗಿದ್ದೆ ಎಂದು ಆರೋಪಿ ಫರ್ಹಾನ್ ಖಾನ್ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.
ಇದರ ಹಿಂದೆ ಸಂಘಟನೆಯೊಂದರ ಸಂಚು ಇರಬಹುದು ಎಂದು ಪೊಲೀಸರು ಖಚಿತ ಪಡಿಸಿದ್ದು, ಇನ್ನಷ್ಟು ಮಂದಿಯ ಬಂಧನ ನಡೆಯಲಿದೆ ಎಂದು ವರದಿಯೊಂದರಿಂದ ತಿಳಿದು ಬಂದಿದೆ.